ನವದೆಹಲಿ: ರಾಷ್ಟ್ರ ರಾಜಧಾನಿಯ ನಿವಾಸಿಗಳನ್ನು ತಲುಪುವ ಉದ್ದೇಶದಿಂದ ಆಗಸ್ಟ್ 14ರಂದು ಪಾದಯಾತ್ರೆ ನಡೆಸಲು ಆಮ್ ಆದ್ಮಿ ಪಕ್ಷದ ನಾಯಕ ಮನೀಷ್ ಸಿಸೋಡಿಯಾ ಸಜ್ಜಾಗಿದ್ದಾರೆ. ಪ್ರಮುಖ ನಾಯಕರ ಜೊತೆ ಭಾನುವಾರ ಸಭೆ ನಡೆಸಿದ ಅವರು, ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಬಗ್ಗೆ ಚರ್ಚಿಸಿದ್ದಾರೆ.
ಸಚಿವರಾದ ಆತಿಶಿ, ಸೌರಭ್ ಭಾರದ್ವಾಜ್, ಗೋಪಾಲ ರಾಯ್ ಮತ್ತು ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್, ಸಂದೀಪ್ ಪಾಠಕ್ ಸೇರಿದಂತೆ ಹಲವರು ಸಭೆಗೆ ಹಾಜರಾಗಿದ್ದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ (ಸಂಘಟನೆ) ಆಗಿರುವ ಪಾಠಕ್ ಅವರು, ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ದೆಹಲಿಯ ಸದ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಗಿದೆ ಎಂದಿದ್ದಾರೆ.
'ಸಿಸೋಡಿಯಾ ಅವರು ಪಕ್ಷದ ಶಾಸಕರೊಂದಿಗೆ ಸೋಮವಾರ, ಕೌನ್ಸಿಲರ್‌ಗಳೊಂದಿಗೆ ಮಂಗಳವಾರ ಸಭೆ ನಡೆಸಲಿದ್ದಾರೆ. ದೆಹಲಿಯ ನಾಗರಿಕರನ್ನು ಭೇಟಿಯಾಗುವ ಸಲುವಾಗಿ ಆಗಸ್ಟ್ 14ರಂದು ಆರಂಭಿಸಲಾಗುವುದು' ಎಂದು ತಿಳಿಸಿದ್ದಾರೆ.
'ನಮ್ಮ ಕೆಲಸಗಳನ್ನು ತಡೆಯುವುದು ಅಥವಾ ಪಕ್ಷವನ್ನು ಒಡೆಯುವುದೊಂದೇ ಬಿಜೆಪಿಯ ಅಜೆಂಡಾ ಎಂಬುದು ದೇಶದ ಜನರಿಗೆ ಸ್ಪಷ್ಟವಾಗಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಎಎಪಿ ಬಲವಾಗಿ ನಿಂತಿದೆ. ಉತ್ತಮ ಕಾರ್ಯಗಳನ್ನು ಮುಂದುವರಿಸಿದೆ' ಎಂದಿದ್ದಾರೆ.