ನವದೆಹಲಿ: ಅಬಕಾರಿ ನೀತಿ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಹಾರ್ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಸುಮಾರು 18 ತಿಂಗಳಿನಿಂದ ಜೈಲಿನಲ್ಲಿದ್ದ ಅವರು ವಿಚಾರಣೆ ಎದುರಿಸುತ್ತಿದ್ದರು.
ಬಿಡುಗಡೆ ಆಗುತ್ತಿದ್ದಂತೆ ‘ಭಾರತ್ ಮಾತಾಕಿ ಜೈ, ಇಂಕ್ವಿಲಾಬ್ ಜಿಂದಾಬಾದ್’ ಎಂದು ಮನೀಶ್ ಸಿಸೋಡಿಯಾ ಘೋಷಣೆ ಕೂಗಿದರು.
'ಸುಪ್ರೀಂ ಕೋರ್ಟ್‌ನಲ್ಲಿ ಬೆಳಿಗ್ಗೆ ಜಾಮೀನು ಕುರಿತ ತೀರ್ಪು ಬಂದಾಗಿನಿಂದ ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಋಣಿಯಾಗಿದ್ದೇನೆ. ಅವರ ಋಣವನ್ನು ಹೇಗೆ ತೀರಿಸುವುದು ತಿಳಿಯುತ್ತಿಲ್ಲ’ಎಂದು ಅವರು ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಸಿಸೋಡಿಯಾಗೆ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ, ಪಾಸ್‌ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬಿತ್ಯಾದಿ ಷರತ್ತುಗಳನ್ನೂ ವಿಧಿಸಿತ್ತು.
ಮನೀಶ್ ಸಿಸೋಡಿಯಾ ಸ್ವಾಗತಕ್ಕೆ ಎಎಪಿಯ ಹಲವು ನಾಯಕರು, ಕಾರ್ಯಕರ್ತರು ತಿಹಾರ್ ಜೈಲಿನ ಬಳಿಗೆ ಆಗಮಿಸಿದ್ದರು.
‘ತಿಹಾರ್ ಜೈಲಿಗೆ ಹಾಕಿದ್ದರೂ ಧೈರ್ಯವಾಗಿ ಅವನ್ನೆಲ್ಲ ಸಿಸೋಡಿಯಾ ಎದುರಿಸಿದ್ದಾರೆ. ದೇಶದಾದ್ಯಂತ ಇರುವ ಪಕ್ಷದ ಕಾರ್ಯಕರ್ತರಿಗೆ ಸಂತೋಷವಾಗಿದೆ. ಪಂಜಾಬ್‌ನಿಂದ ಅವರ ಸ್ವಾಗತಕ್ಕೆ ಆಗಮಿಸಿದೆ’ಎಂದು ಪಂಜಾಬ್ ಸಚಿವ ಬ್ರಹ್ಮ ಶಂಕರ ಶರ್ಮಾ ಹೇಳಿದ್ದಾರೆ.