ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | ರಾಯಗಡದಲ್ಲಿ ಭೂಕುಸಿತ; 16 ಮಂದಿ ಜೀವಂತ ಸಮಾಧಿ, 75 ಮಂದಿಯ ರಕ್ಷಣೆ

Published 20 ಜುಲೈ 2023, 2:05 IST
Last Updated 20 ಜುಲೈ 2023, 2:05 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಕರಾವಳಿ ಕೊಂಕಣಿ ಪ್ರದೇಶಕ್ಕೆ ಸೇರಿದ ರಾಯಗಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 16 ಬುಡಕಟ್ಟು ಜನರು ಜೀವಂತ ಸಮಾಧಿಯಾಗಿದ್ದಾರೆ. ಅವಶೇಷಗಳಡಿ 80–100 ಮಂದಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ  ಭರದಿಂದ ಸಾಗಿದೆ.

ರಾಯಗಡ ಜಿಲ್ಲೆಯ ಖಲಾಪುರ ತಾಲ್ಲೂಕಿನ ಇರ್ಶಾಲವಾಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಧಾರಾಕಾರವಾಗಿ ಸುರಿದ ಮಳೆಯೇ ಅವಘಡಕ್ಕೆ ಕಾರಣವಾಗಿದೆ. ಈ ಹಳ್ಳಿಯಲ್ಲಿ 48 ಮನೆಗಳಿದ್ದು, ಈ ಪೈಕಿ 17 ಮನೆಗಳು ನೆಲಸಮಗೊಂಡಿವೆ. ಒಟ್ಟು 288 ಜನರು ಇಲ್ಲಿ ವಾಸಿಸುತ್ತಿದ್ದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ನಾಲ್ಕು ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು (ಎಸ್‌ಡಿಆರ್‌ಎಫ್‌), ಮಹಾರಾಷ್ಟ್ರ ಪರ್ವತಾರೋಹಿ ರಕ್ಷಣಾ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿಯು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಚಾರಣಿಗರು, ಸ್ಥಳೀಯ ಅಧಿಕಾರಿಗಳು ಇದಕ್ಕೆ ಕೈಜೋಡಿಸಿದ್ದಾರೆ. ಪುಣೆಯಿಂದಲೂ ರಕ್ಷಣಾ ತಂಡ ಕಳುಹಿಸಲಾಗಿದೆ. ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ 500ಕ್ಕೂ ಹೆಚ್ಚು ನೌಕರರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಮುಂಬೈ ಮಹಾನಗರಿಗೆ ಕುಡಿಯುವ ನೀರು ಪೂರೈಸುವ ಮೋರ್ಬೇ ಜಲಾಶಯಕ್ಕೆ ಆರು ಕಿ.ಮೀ ಸನಿಹದಲ್ಲಿಯೇ ಈ ಹಳ್ಳಿಯಿದೆ. ಬುಡಕಟ್ಟು ಜನರೇ ಹೆಚ್ಚಿರುವ ಈ ಗ್ರಾಮವು ಸುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಕಚ್ಚಾ ರಸ್ತೆ ಮೂಲಕವೇ ಇಲ್ಲಿಗೆ ತೆರಳಬೇಕಿದೆ.

ಕಳೆದ ಮೂರು ದಿನಗಳಲ್ಲಿ ಈ ಭಾಗದಲ್ಲಿ 499 ಮಿ.ಮೀ ಮಳೆ ಸುರಿದಿದೆ. 15ರಿಂದ 20 ಅಡಿ ಎತ್ತರದವರೆಗೆ ಕಲ್ಲು, ಮಣ್ಣಿನ ರಾಶಿ ಬಿದ್ದಿದೆ. ಮತ್ತೊಂಡೆದೆ ಮಳೆಯೂ ನಿಂತಿಲ್ಲ. ಹಾಗಾಗಿ, ರಕ್ಷಣಾ ಪರಿಕರಗಳನ್ನು ತೆಗೆದುಕೊಂಡು ಹೋಗುವುದು ಸವಾಲಾಗಿದೆ.

ಕಾರ್ಯಾಚರಣೆಗೆ ನೆರವಾಗಲು ಭಾರತೀಯ ವಾಯುಪಡೆಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಕೂಡ ಸನ್ನದ್ಧವಾಗಿವೆ. ಗ್ರಾಮದ ಬಳಿಕ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಆದರೆ, ಪ್ರತಿಕೂಲ ಹವಾಮಾನದಿಂದ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ದುರಂತದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಕಾರ್ಯಾಚರಣೆ ಸ್ಥಗಿತ: ಸ್ಥಳದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಜೊತೆಗೆ, ಕತ್ತಲು ಆವರಿಸುವುದರಿಂದ ಸಂಜೆ 5ಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 5ಗಂಟೆಯಿಂದ ಮತ್ತೆ ಆರಂಭಿಸಲಾಗುತ್ತದೆ ಎಂದು ಎನ್‌ಡಿಆರ್‌ಎಫ್‌ ತಿಳಿಸಿದೆ.

153 ಮಂದಿ ಮೃತಪಟ್ಟಿದ್ದರು: ಪುಣೆ ಜಿಲ್ಲೆಯ ಅಂಬೆಗಾಂವ್ ತಾಲ್ಲೂಕಿನ ಮಲಿನ್‌ ಗ್ರಾಮದಲ್ಲಿ 2014ರ ಜುಲೈ 30ರಂದು ಸಂಭವಿಸಿದ ಭೂಕುಸಿತದಲ್ಲಿ 153 ಮಂದಿ ಮೃತಪಟ್ಟಿದ್ದರು. ಬುಡಕಟ್ಟು ಜನರೇ ವಾಸಿಸುತ್ತಿದ್ದ ಈ ಗ್ರಾಮದ 50 ಕುಟುಂಬಗಳ ಬದುಕನ್ನು ಮಳೆ ಕಸಿದುಕೊಂಡಿತ್ತು.

ದುರಂತ ಸ್ಥಳಕ್ಕೆ ಸಿ.ಎಂ ಶಿಂದೆ ಭೇಟಿ

ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಗುರುವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ರಕ್ಷಣಾ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಅವರು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.

ಗ್ರಾಮವು ಭೂಕುಸಿತದ ಅಪಾಯ ಪಟ್ಟಿಯಲ್ಲಿ ಇಲ್ಲ. 103 ಜನರು ಜೀವಂತವಾಗಿದ್ದಾರೆ. ಕೆಲವರು ಭತ್ತದ ಗದ್ದೆಗಳಲ್ಲಿ ಕೆಲಸಕ್ಕೆ ತೆರಳಿದ್ದಾರೆ. ಮಕ್ಕಳು ಶಾಲೆಗಳಿಗೆ ಹೋಗಿದ್ದಾರೆ. ಉಳಿದವರ ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

‘ಸಂತ್ರಸ್ತರಿಗೆ ಸುರಕ್ಷಿತ ಸ್ಥಳದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ. ಅವರಿಗೆ ಶಾಶ್ವತ ಪುನರ್ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಕುರಿತು ಜಿಲ್ಲಾಡಳಿತದ ಜೊತೆಗೆ ಚರ್ಚಿಸಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT