ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ನಡ್ಡಾ ಭೇಟಿ ಬಳಿಕ FORDA ಧರಣಿ ಅಂತ್ಯ

Published 14 ಆಗಸ್ಟ್ 2024, 5:08 IST
Last Updated 14 ಆಗಸ್ಟ್ 2024, 5:08 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್(ಎಫ್‌ಒಆರ್‌ಡಿಎ) ಅಂತ್ಯಗೊಳಿಸಿದೆ.

ಕೇಂದ್ರ ಆರೋಗ್ಯ ಸಚಿವ ಜೆ,ಪಿ. ನಡ್ಡಾ ಜೊತೆಗಿನ ಮಾತುಕತೆ ಬಳಿಕ ಸಂಘಟನೆ ಈ ನಿರ್ಧಾರ ಕೈಗೊಂಡಿದೆ. ಆರೋಗ್ಯ ಸಚಿವರು ನಮ್ಮ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಆದರೆ, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಏಮ್ಸ್, ಇಂದಿರಾಗಾಂಧಿ ಆಸ್ಪತ್ರೆ ಮತ್ತು ಇತರ ನಿವಾಸಿ ವೈದ್ಯರ ಸಂಘಗಳು, ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟಗಳು, ವೈದ್ಯಕೀಯ ಸಿಬ್ಬಂದಿ ಮೇಲಿನ ದಾಳಿ ತಡೆಗೆ ಕಾನೂನು ಜಾರಿ ಮಾಡುವವರೆಗೂ ಮತ್ತು ಸಮರ್ಪಕ ಪರಿಹಾರ ಸಿಗುವವರೆಗೂ ತಮ್ಮ ಪ್ರತಿಭಟನೆ ಮುಂದುವರಿಯುವುದಾಗಿ ಹೇಳಿವೆ.

ಮಂಗಳವಾರ ರಾತ್ರಿ ದೆಹಲಿಯ ನಿವಾಸದಲ್ಲಿ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಫೋರ್ಡಾ(FORDA) ಸದಸ್ಯರು, ಮಾತುಕತೆ ಬಳಿಕ ಬುಧವಾರ ಬೆಳಿಗ್ಗೆಯಿಂದ ಪ್ರತಿಭಟನೆ ಹಿಂಪಡೆಯುವುದಾಗಿ ಘೋಷಿಸಿದರು.

‘ವೈದ್ಯಕೀಯ ಸಿಬ್ಬಂದಿಗಾಗಿ ಕೇಂದ್ರೀಯ ಭದ್ರತಾ ಕಾನೂನು ಜಾರಿಗೆ ಫೋರ್ಡಾ ಸದಸ್ಯರನ್ನೊಳಗೊಂಡ ಸಮಿತಿ ರಚನೆಗೆ ನಡ್ಡಾ ಒಪ್ಪಿಗೆ ಸೂಚಿಸಿದ್ದಾರೆ. ಈ ಸಂಬಂಧ 15 ದಿನಗಳಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ಸಿಕ್ಕಿದೆ’ ಎಂದು ಫೋರ್ಡಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ಸಮಿತಿಯು ವೈದ್ಯಕೀಯ ಸಿಬ್ಬಂದಿಗೆ ಸುರಕ್ಷಿತ ಕೆಲಸದ ವಾತಾವರಣ ಸೃಷ್ಟಿಮಾಡುವ ಉದ್ದೇಶದಿಂದ ಶೀಘ್ರ ಕಾನೂನು ಜಾರಿ ಕುರಿತಂತೆ ಗಮನ ಕೇಂದ್ರೀಕರಿಸಲಿದೆ. ಮುಂದಿನ ಎರಡು ವಾರಗಳಲ್ಲಿ ಫೋರ್ಡಾ ಸದಸ್ಯರನ್ನೊಳಗೊಂಡ ಸಮಿತಿ ಸಭೆಗಳನ್ನು ಆರಂಭಿಸಲಿದೆ’ ಎಂದೂ ಅದು ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ ಶೀಘ್ರ ಈ ಸಂಬಂಧಿತ ಅಧಿಕೃತ ಪ್ರಕಟಣೆ ಹೊರಬೀಳೂವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.

‘ಮಾನವೀಯತೆಯ ನೆಲೆಗಟ್ಟಿನಲ್ಲಿ ಸೇವೆ ನಮ್ಮ ಗುರಿ. ನಾವು ಸುರಕ್ಷಿತ ಎಂದು ಅನಿಸಿದಾಗ ಮಾತ್ರ ಅದನ್ನು ಮಾಡಲು ಸಾಧ್ಯ’ಎಂದು ಫೋರ್ಡಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT