ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತವೇ ನನ್ನ ಕುಟುಂಬ: ವಿರೋಧ ಪಕ್ಷಗಳ ಟೀಕೆಗೆ ಪ್ರಧಾನಿ ಮೋದಿ ತಿರುಗೇಟು

Published 4 ಮಾರ್ಚ್ 2024, 10:55 IST
Last Updated 4 ಮಾರ್ಚ್ 2024, 10:55 IST
ಅಕ್ಷರ ಗಾತ್ರ

ಆದಿಲಾಬಾದ್‌ (ತೆಲಂಗಾಣ): ಪ್ರಧಾನಿ ಮೋದಿಗೆ ಕುಟುಂಬವಿಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತವೇ ನನ್ನ ಕುಟುಂಬ ಎಂದು ಹೇಳಿದ್ದಾರೆ.

‘ನನ್ನ ಭಾರತ, ನನ್ನ ಪರಿವಾರ’ (ಮೇರಾ ಭಾರತ್, ಮೇರಾ ಪರಿವಾರ್) ಎಂದು ಹೇಳಿರುವ ಮೋದಿ, ಇಡೀ ಭಾರತವು ತಮ್ಮ ಕುಟುಂಬವಾಗಿದೆ ಮತ್ತು ಅವರ ಜೀವನವು ತೆರೆದ ಪುಸ್ತಕವಾಗಿದೆ ಎಂದು ತಿಳಿಸಿದ್ದಾರೆ.

ಆದಿಲಾಬಾದ್‌ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜನಸೇವೆ ಮಾಡುವ ಕನಸಿನಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮನೆ ತೊರೆದಿದ್ದೇನೆ. ಜತೆಗೆ ಜನರ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸೇವಕನ ರೀತಿ ಸಮರ್ಪಿಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಕುಟುಂಬವಿಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತವೆ. ಆದರೆ, ದೇಶದ 140 ಕೋಟಿ ಜನರೇ ನನ್ನ ಕುಟುಂಬವಾಗಿದೆ. ‘ನನ್ನ ಭಾರತವೇ ನನ್ನ ಕುಟುಂಬ’ (ಮೇರಾ ಭಾರತ್, ಮೇರಾ ಪರಿವಾರ್) ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ನನ್ನ ಜೀವನವು ತೆರೆದ ಪುಸ್ತಕವಾಗಿದೆ. ಇದರ ಬಗ್ಗೆ ದೇಶದ ಜನರಿಗೆ ತಿಳಿದಿದೆ. ನನ್ನ ಬಾಲ್ಯದಲ್ಲಿ ನಾನು ಮನೆಯನ್ನು ತೊರೆದಾಗ, ದೇಶದ ಜನರಿಗಾಗಿ ಬದುಕಬೇಕೆಂಬ ಕನಸು ಹೊತ್ತು ಹೊರಬಂದೆ ಎಂದು ಅವರು ತಿಳಿಸಿದ್ದಾರೆ.

‘ಈ ದೇಶದಲ್ಲಿ ವಂಶಪಾರಂಪರ್ಯ ಪಕ್ಷಗಳು ಬೇರೆಬೇರೆಯೇ ಇರಬಹುದು. ಆದರೆ ಅವುಗಳ ಗುಣಲಕ್ಷಣ ಸುಳ್ಳು ಮತ್ತು ಲೂಟಿಯೇ (ಜೂಟ್ ಮತ್ತು ಲೂಟ್‌) ಆಗಿದೆ. ತೆಲಂಗಾಣದಲ್ಲಿ ಟಿಆರ್‌ಎಸ್‌ ಪಕ್ಷವು ಬಿಆರ್‌ಎಸ್‌ ಎಂದು ಮರುನಾಮಕರಣಗೊಂಡರೂ ರಾಜ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ’ ಎಂದು ಕಿಡಿಕಾರಿದ್ದಾರೆ.

ತೆಲಂಗಾಣದಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಸಿಆರ್‌) ಪಕ್ಷವನ್ನು 2022ರ ಅಕ್ಟೋಬರ್‌ 5ರಂದು ಕೆ. ಚಂದ್ರಶೇಖರ್‌ ರಾವ್‌ ಅವರು ಭಾರತ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್‌) ಎಂದು ಮರುನಾಮಕರಣ ಮಾಡಿದ್ದರು.

ತಮ್ಮ ಸರ್ಕಾರವು ಆದಿವಾಸಿಗಳ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅವರ ಕಲ್ಯಾಣಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತದೆ. ಆದರೆ, ಸರ್ಕಾರ ಮಾಡುತ್ತಿರುವ ಕೆಲಸಗಳನ್ನು ವಂಶಪಾರಂಪರ್ಯ ಪಕ್ಷಗಳು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಸುಮಾರು ₹56 ಸಾವಿರ ಕೋಟಿ‌ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT