ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆಯ ಅವಧಿಯೊಂದೇ ಶಿಕ್ಷೆ ಅಮಾನತಿಗೆ ಆಧಾರವಲ್ಲ: ಸುಪ್ರೀಂ ಕೋರ್ಟ್‌ 

Published 27 ಏಪ್ರಿಲ್ 2024, 15:58 IST
Last Updated 27 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ನವದೆಹಲಿ: ಜೀವಾವಧಿ ಶಿಕ್ಷೆಯ ಪ್ರಕರಣಗಳಲ್ಲಿ, ಬೇರೆ ಅಗತ್ಯ ಅಂಶಗಳನ್ನು ಪರಿಗಣಿಸದೆ ನಿರ್ದಿಷ್ಟ ಅವಧಿಗೆ ಕಾರಾಗೃಹವಾಸ ಪೂರ್ಣಗೊಂಡಿದೆ ಎಂಬ ಒಂದೇ ಆಧಾರದಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಮಾತು ಹೇಳಿರುವ ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಮತ್ತು ರಾಜೇಶ್ ಬಿಂದಲ್ ಅವರು ಇದ್ದ ವಿಭಾಗೀಯ ಪೀಠವು, ಯುವತಿಯ ಮೇಲೆ ಆ್ಯಸಿಡ್ ಎರಚಿ ದಾಳಿ ಮಾಡಿದ್ದ ಐವರ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಅಸಿಂಧುಗೊಳಿಸಿದೆ.

ಶಿಕ್ಷೆಗೆ ಗುರಿಯಾದವರು ತಾವು ಸಂತ್ರಸ್ತ ವ್ಯಕ್ತಿಗೆ ₹25 ಲಕ್ಷ ಪರಿಹಾರ ನೀಡಲು ಮುಂದಾಗಿದ್ದರ ಆಧಾರದಲ್ಲಿ ಹೈಕೋರ್ಟ್‌ ಈ ನಿಲುವು ತಾಳಿತು ಎಂದು ಶಿವಾನಿ ತ್ಯಾಗಿ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೇಳಿದೆ.

‘ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ, ಅದರ ಪರಿಣಾಮವಾಗಿ ಆಕೆ ಶಾಶ್ವತ ತೊಂದರೆಗೆ ಒಳಗಾಗಬೇಕಾದ ಪ್ರಕರಣ ಇದು. ಹೈಕೋರ್ಟ್ ಆದೇಶವನ್ನು ಪರಿಶೀಲಿಸಿದಾಗ ನಮಗೆ ಸಮಾಧಾನ ಆಗುತ್ತಿಲ್ಲ. ಇಲ್ಲಿ ಅಗತ್ಯ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದು ನ್ಯಾಯಮೂರ್ತಿ ರವಿಕುಮಾರ್ ಅವರು ಹೇಳಿದ್ದಾರೆ.

ಆ್ಯಸಿಡ್ ದಾಳಿಯು ಸಂತ್ರಸ್ತ ವ್ಯಕ್ತಿಯ ಪಾಲಿಗೆ ಶಮನ ಮಾಡಲು ಸಾಧ್ಯವೇ ಇಲ್ಲದಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು. ಆ ಮೂಲಕ ಆ ವ್ಯಕ್ತಿಯ ಪಾಲಿಗೆ ಚೆಂದದ ಬದುಕು ಸಾಗಿಸುವ ಮೂಲಭೂತ ಹಕ್ಕನ್ನೇ ಕಿತ್ತುಕೊಳ್ಳಬಹುದು ಎಂದು ವಿಭಾಗೀಯ ಪೀಠವು ಹೇಳಿದೆ.

ಅಪರಾಧಿಗಳ ಜಾಮೀನನ್ನು ವಿಸ್ತರಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ದಾಖಲಿಸಿದೆ. ಅಪರಾಧಿಗಳು ಸಂತ್ರಸ್ತೆಗೆ ₹25 ಲಕ್ಷ ನೀಡಲು ಮುಂದಾಗಿದ್ದರ ಬಗ್ಗೆಯೂ ಕೆಲವು ಮಾತುಗಳನ್ನು ಹೇಳಿದೆ.

‘ಇದು ಒಂದು ರೀತಿಯಲ್ಲಿ, ಅಪರಾಧಿಗಳು ಸಂತ್ರಸ್ತ ವ್ಯಕ್ತಿಗೆ ರಕ್ತಸಿಕ್ತವಾದ ಹಣ ಕೊಡಲು ಮುಂದಾದಂತೆ. ಇಂಥದ್ದಕ್ಕೆ ನಮ್ಮ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಒಪ್ಪಿಗೆ ಇಲ್ಲ’ ಎಂದು ನ್ಯಾಯಮೂರ್ತಿ ಬಾದಲ್ ಹೇಳಿದ್ದಾರೆ.

ನಡೆದಿದೆ ಎನ್ನಲಾದ ಅಪರಾಧದ ಸ್ವರೂಪ, ಅಪರಾಧ ನಡೆಸಿದ ಬಗೆ, ಅಪರಾಧದ ಗಾಂಭೀರ್ಯ, ಅಪರಾಧಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಎಷ್ಟರಮಟ್ಟಿಗೆ ಅಪೇಕ್ಷಣೀಯ ಎಂಬುದನ್ನು ವಸ್ತುನಿಷ್ಠವಾಗಿ ಪರಿಗಣಿಸಬೇಕು, ಆ ಪರಿಗಣನೆಗಳು ಆದೇಶಲ್ಲಿ ಪ್ರತಿಫಲಿಸಬೇಕು ಎಂದು ಎರಡು ಪ್ರತ್ಯೇಕ, ಸಹಮತದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಹೇಳಿದೆ.

ಆ್ಯಸಿಡ್ ದಾಳಿಯ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ನ್ಯಾಯಮೂರ್ತಿ ಬಿಂದಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT