ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ: ದಲಿತ ಯುವತಿಯ ಮೃತದೇಹ ಮಾಜಿ ಸಚಿವರ ಮಗನ ಆಶ್ರಮದಲ್ಲಿ ಪತ್ತೆ

Last Updated 11 ಫೆಬ್ರುವರಿ 2022, 10:37 IST
ಅಕ್ಷರ ಗಾತ್ರ

ಉನ್ನಾವೊ: ನಾಪತ್ತೆಯಾಗಿದ್ದ 22 ವರ್ಷ ವಯಸ್ಸಿನ ದಲಿತ ಯುವತಿಯ ಮೃತದೇಹ ಉತ್ತರ ಪ್ರದೇಶದ ಮಾಜಿ ಸಚಿವರೊಬ್ಬರ ಮಗನ ಒಡೆತನದ ಆಶ್ರಮದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಘಟನೆ ವ್ಯಾಪ್ತಿಯ (ಉನ್ನಾವೊ) ‘ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ)’ ಅವರನ್ನು ಅಮಾನತುಗೊಳಿಸಲಾಗಿದೆ.

ಸಮಾಜವಾದಿ (ಎಸ್‌ಪಿ) ಪಕ್ಷದ ನಾಯಕ, ಮಾಜಿ ಸಚಿವ ದಿ. ಫತೇಹ್ ಬಹದೂರ್ ಸಿಂಗ್ ಅವರ ಮಗ ರಾಜೊಲ್ ಸಿಂಗ್‌ ಅವರನ್ನು ಯುವತಿಯನ್ನು ಅ‍ಪಹರಿಸಿದ್ದ ಆರೋಪದಲ್ಲಿ ಜನವರಿ 24ರಂದೇ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ತಾಯಿಯು ಜನವರಿ 25ರಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಾಹನದ ಎದುರು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ತನಿಖೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಸ್ಥಳೀಯ ಎಸ್‌ಎಚ್‌ಒ ಅಖಿಲೇಶ್ ಚಂದ್ರ ಪಾಂಡೆ ವಿರುದ್ಧ ಅವರು ಆರೋಪ ಮಾಡಿದ್ದರು.

‘ಡಿಸೆಂಬರ್ 8ರಂದು ನಾಪತ್ತೆ ವಿಚಾರವಾಗಿ ದೂರು ದಾಖಲಾಗಿತ್ತು. ನಿಯಮಗಳಿಗೆ ಅನುಸಾರ ಜನವರಿ 10ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಒಬ್ಬ ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿತ್ತು. ತನಿಖೆ ವೇಳೆ ಕಲೆಹಾಕಿದ ಮಾಹಿತಿಗಳ ಆಧಾರದಲ್ಲಿ ಮೃತದೇಹವನ್ನು ಪತ್ತೆಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಉನ್ನಾವೊದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಶಿ ಶೇಖರ್ ಸಿಂಗ್ ತಿಳಿಸಿದ್ದಾರೆ.

ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರು ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ.

‘ರಾಜೊಲ್ ಸಿಂಗ್ ನನ್ನ ಮಗಳನ್ನು ಹತ್ಯೆ ಮಾಡಿ ಆಶ್ರಮದ ಆವರಣದಲ್ಲಿ ಹೂತುಹಾಕಿದ್ದಾರೆ. ನಾನು ಈ ಹಿಂದೆ ಆಶ್ರಮಕ್ಕೆ ಹೋಗಿದ್ದೆ. ಮೂರು ಮಹಡಿ ಕಟ್ಟಡ ಹೊರತುಪಡಿಸಿ ಆಶ್ರಮದ ಎಲ್ಲ ಸ್ಥಳಗಳನ್ನು ಅಲ್ಲಿದ್ದವರು ತೋರಿಸಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದೆ, ಸ್ವಿಚ್ಡ್ ಆಫ್ ಬರುತ್ತಿತ್ತು. ಅವರು ಬಂದಿದ್ದರೆ ನನ್ನ ಮಗಳು ಜೀವಂತ ವಾಪಸ್ ಸಿಗುತ್ತಿದ್ದಳು’ ಎಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT