ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಾನಾ ವಿರುದ್ಧದ ತನಿಖೆಗೆ ಅಜಿತ್ ಡೋಭಾಲ್‌ ಅಡ್ಡಿ: ಸಿಬಿಐ ಅಧಿಕಾರಿ ಆರೋಪ

ಉದ್ಯಮಿ ಪರ ಮಧ್ಯಸ್ಥಿಕೆಗೆ ಲಂಚ ಪಡೆದಿದ್ದ ಕೇಂದ್ರ ಸಚಿವ
Last Updated 19 ನವೆಂಬರ್ 2018, 11:24 IST
ಅಕ್ಷರ ಗಾತ್ರ

ನವದೆಹಲಿ:ಲಂಚ ಪಡೆದ ಆರೋಪ ಎದುರಿಸುತ್ತಿರುವ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧದ ತನಿಖೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌ ಅಡ್ಡಿಪಡಿಸಿದ್ದರು ಎಂದು ಸಿಬಿಐ ಅಧಿಕಾರಿ ಎಂ.ಕೆ. ಸಿನ್ಹಾ ಆರೋಪಿಸಿದ್ದಾರೆ.

ಅಸ್ತಾನಾ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸುವುದಕ್ಕೂ ಡೋಭಾಲ್ ಅಡ್ಡಿ‍ಪಡಿಸಿದ್ದರು. ಲಂಚ ಪ್ರಕರಣದಲ್ಲಿ ಶಾಮೀಲಾಗಿರುವ ಇಬ್ಬರು ಮಧ್ಯವರ್ತಿಗಳು ಡೋಭಾಲ್ ಆಪ್ತರು ಎಂದೂ ಸಿನ್ಹಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅಸ್ತಾನಾ ವಿರುದ್ಧದ ಎಫ್‌ಐಆರ್‌ ಬಗ್ಗೆ ಅಕ್ಟೋಬರ್ 17ರಂದು ರಾತ್ರಿ ಅಲೋಕ್ ವರ್ಮಾ ಮಾಹಿತಿ ನೀಡಿದ ನಂತರ ಡೋಭಾಲ್ ಅದನ್ನು ಅಸ್ತಾನಾ ಅವರಿಗೆ ತಿಳಿಸಿದ್ದರು. ಈ ವೇಳೆ, ತಮ್ಮನ್ನು ಬಂಧಿಸಬಾರದು ಎಂದು ಅಸ್ತಾನಾ ಮನವಿ ಮಾಡಿದ್ದರು ಎಂದು ಸಿನ್ಹಾ ಹೇಳಿದ್ದಾರೆ.

ಅಸ್ತಾನಾ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಲು ಡೋಭಾಲ್ ಅವರಿಂದ ಅನುಮತಿ ದೊರೆಯುತ್ತಿಲ್ಲ ಎಂದು ವರ್ಮಾ ಅವರು ತಮ್ಮ ಬಳಿ ಹೇಳಿದ್ದರು. ಸಿಬಿಐ ಡಿವೈಎಸ್‌ಪಿ ದೇವೇಂದ್ರ ಕುಮಾರ್ ಅವರ ನಿವಾಸದಲ್ಲಿ ಶೋಧ ನಡೆಸುತ್ತಿದ್ದಾಗ ತನಿಖಾ ತಂಡಕ್ಕೆ ಕರೆ ಮಾಡಿದ್ದ ವರ್ಮಾ, ಶೋಧ ಕಾರ್ಯ ನಿಲ್ಲಿಸುವಂತೆ ಸೂಚಿಸಿದ್ದರು. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದಾಗ, ‘ಡೋಭಾಲ್ ಸೂಚನೆಯಿದೆ’ ಎಂದು ವರ್ಮಾ ಪ್ರತಿಕ್ರಿಯಿಸಿದ್ದರು ಎಂದೂಸಿನ್ಹಾ ತಿಳಿಸಿದ್ದಾರೆ.

ಸಿಬಿಐನ ಕಲಹ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಹೀಗೆ ವರ್ಗವಾದ ಅಧಿಕಾರಿಗಳ ಪೈಕಿ, ಅಸ್ತಾನಾ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವಎಂ.ಕೆ. ಸಿನ್ಹಾ ಸಹ ಒಬ್ಬರು. ವರ್ಗಾವಣೆ ಪ್ರಶ್ನಿಸಿ ಇವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿಗೆ ಲಂಚ’

ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ನೆರವಾಗಲು ಕೇಂದ್ರ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಕೆಲವು ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ದೂರುದಾರರೊಬ್ಬರು ತಿಳಿಸಿದ್ದಾರೆ ಎಂದೂಸಿನ್ಹಾ ಹೇಳಿದ್ದಾರೆ.ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್ ಸನಾ ಅವರ ಹೇಳಿಕೆ ಉಲ್ಲೇಖಿಸಿ ಸಿನ್ಹಾ ಈ ಮಾಹಿತಿ ನೀಡಿದ್ದು, ಈ ವರ್ಷ ಜೂನ್‌ ತಿಂಗಳ ಮೊದಲಾರ್ಧದಲ್ಲಿ ಲಂಚ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಸಿಬಿಐ ಪ್ರಕರಣವನ್ನು ಪ್ರಧಾನಿ ಕಾರ್ಯಾಲಯ ನಿಭಾಯಿಸಿದೆ ಎಂದು ರಾ ಅಧಿಕಾರಿ ಸಮಂತ್ ಗೋಯೆಲ್ ಮಾತನಾಡಿರುವುದು ನಮ್ಮ ಗಮನಕ್ಕೆ ಬಂದಿತ್ತು. ಅದೇ ದಿನ ರಾತ್ರಿ ಅಸ್ತಾನಾ ಪ್ರಕರಣದ ತನಿಖೆ ನಡೆಸುತ್ತಿರುವ ಇಡೀ ಸಿಬಿಐ ತಂಡವನ್ನು ತೆಗೆದುಹಾಕಲಾಯಿತು ಎಂದುಸಿನ್ಹಾ ಹೇಳಿದ್ದಾರೆ.

ಮಾಂಸ ರಫ್ತುದಾರ ಮೊಯಿನ್ ಖುರೇಷಿ ಪ್ರಕರಣಕ್ಕೆ ಸಂಬಂಧಿಸಿ ಕೆ.ವಿ. ಚೌಧರಿ,ಕೇಂದ್ರ ಜಾಗೃತ ಆಯೋಗವನ್ನು (ಸಿವಿಸಿ) ಸತೀಶ್ ಸನಾ ಭೇಟಿ ಮಾಡಿದ್ದರು. ಕೇಂದ್ರ ಕಾನೂನು ಕಾರ್ಯದರ್ಶಿ ಸುರೇಶ್‌ಚಂದ್ರ ಅವರನ್ನೂ ನವೆಂಬರ್ 11ರಂದು ಸಂಪರ್ಕಿಸಿದ್ದರು. ಸಿಬಿಐ ಕಲಹದ ಕುರಿತು ಸುಪ್ರೀಂ ಕೋರ್ಟ್‌ ಸಿವಿಸಿ ತನಿಖೆಗೆ ಆದೇಶಿಸಿದ ಸಂದರ್ಭದಲ್ಲೇ ಪ್ರಕರಣಕ್ಕೆ ಸಂಬಂಧಿಸಿ ಪ್ರಭಾವ ಬೀರಲು ಯತ್ನಿಸಲಾಗಿತ್ತು ಎಂದೂಸಿನ್ಹಾ ಅವರ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಸ್ತಾನಾ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮನೋಜ್ ಪ್ರಸಾದ್ ತಂದೆ ದಿನೇಶ್ವರ್ ಪ್ರಸಾದ್ (ರಾ ಸಂಸ್ಥೆಯ ನಿವೃತ್ತ ಕಾರ್ಯದರ್ಶಿ) ಅಜಿತ್ ಡೋಭಾಲ್ ಜತೆ ನಿಕಟ ಪರಿಚಯ ಹೊಂದಿದ್ದರು ಎಂಬುದನ್ನು ಮನೋಜ್ ಅವರೇ ಹೇಳಿಕೊಂಡಿದ್ದಾರೆ ಎಂದೂ ಅರ್ಜಿಯಲ್ಲಿ ಸಿನ್ಹಾ ಉಲ್ಲೇಖಿಸಿದ್ದಾರೆ. ಸಿಬಿಐ ಕಚೇರಿಗೆ ಕರೆದುಕೊಂಡು ಬಂದಾಗ ಈ ವಿಷಯವನ್ನು ಮನೋಜ್ ಹೇಳಿದ್ದರು. ಅಲ್ಲದೆ, ಢೋಭಾಲ್ ಜತೆ ನಿಕಟ ಸಂಬಂಧವಿರುವ ತಮ್ಮನ್ನು ಬಂಧಿಸಿದ್ದಕ್ಕೆ ಆಘಾತ ಮತ್ತು ಕ್ರೋಧ ವ್ಯಕ್ತಪಡಿಸಿದ್ದರು ಎಂದೂ ಸಿನ್ಹಾ ಹೇಳಿದ್ದಾರೆ.

ತಮ್ಮ ಸಹೋದರ ಸೋಮೇಶ್ ಮತ್ತು ಸಮಂತ್ ಗೋಯೆಲ್ ಪ್ರಮುಖವಾದ ವೈಯಕ್ತಿಕ ವಿಚಾರವೊಂದರಲ್ಲಿ ಡೋಭಾಲ್ ಅವರಿಗೆ ಸಹಾಯ ಮಾಡಿದ್ದರು ಎಂಬುದಾಗಿ ಮನೋಜ್ ಪ್ರಸಾದ್ ಇತ್ತೀಚೆಗೆ ಹೇಳಿದ್ದರು ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಬಂಧಿತ ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT