ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್‌ಗೆ ಸಿಗುತ್ತಿರುವ ಸೌಲಭ್ಯವೂ ಕೇಜ್ರಿವಾಲ್‌ಗೆ ಸಿಗ್ತಿಲ್ಲ: ಸಂಜಯ್ ಸಿಂಗ್

Published 16 ಏಪ್ರಿಲ್ 2024, 13:17 IST
Last Updated 16 ಏಪ್ರಿಲ್ 2024, 13:17 IST
ಅಕ್ಷರ ಗಾತ್ರ

ನವದೆಹಲಿ: ನಾನು ಅರವಿಂದ ಕೇಜ್ರಿವಾಲ್, ಭಯೋತ್ಪಾದಕನಲ್ಲ ಎಂದು ತಿಹಾರ್ ಜೈಲಿಂದಲೇ ದೆಹಲಿ ಮುಖ್ಯಮಂತ್ರಿ ಜನರಿಗೆ ಸಂದೇಶ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಎಪಿ ನಾಯಕ ಸಂಜಯ್ ಸಿಂಗ್, ಕಸ್ಟಡಿಯಲ್ಲಿ ಕೇಜ್ರಿವಾಲ್ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ದುರುದ್ದೇಶ ಮತ್ತು ಸೇಡಿನ ರಾಜಕಾರಣ ಮಾಡುತ್ತಿರುವ ಬಿಜೆಪಿ, ಕೇಜ್ರಿವಾಲ್ ಅವರನ್ನು ಹಣಿಯಲು ಯತ್ನಿಸುತ್ತಿದೆ. ಆದರೆ, ಅವರು ಮತ್ತಷ್ಟು ಬಲಿಷ್ಠರಾಗಿ ಹೊರಬರಲಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಿಹಾರ್‌ ಜೈಲಿನಲ್ಲಿರುವ ನಟೋರಿಯಸ್ ಕ್ರಿಮಿನಲ್‌ಗೆ ವಕೀಲರು ಮತ್ತು ಪತ್ನಿಯನ್ನು ಬ್ಯಾರಕ್‌ನಲ್ಲಿ ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಕೇಜ್ರಿವಾಲ್ ಅವರನ್ನು ಪಂಜಾಬ್ ಸಿಎಂ ಭಗವಂತ ಮಾನ್ ಭೇಟಿ ಮಾಡಲು ಗ್ಲಾಸ್ ಸ್ಕ್ರೀನ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅದರಿಂದ ತೀವ್ರವಾಗಿ ನೊಂದಿರುವ ಅರವಿಂದ ಕೇಜ್ರಿವಾಲ್, ‘ನಾನು ಅರವಿಂದ ಕೇಜ್ರಿವಾಲ್, ಭಯೋತ್ಪಾದಕನಲ್ಲ’ಎಂಬ ಸಂದೇಶವನ್ನು ದೇಶದ ಜನರಿಗೆ ಕಳುಹಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

2010ರಲ್ಲಿ ಬಿಡುಗಡೆಯಾದ ಶಾರುಕ್ ಖಾನ್ ಅಭಿನಯದ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಶಾರುಖ್ ಖಾನ್,‘ಮೈ ನೇಮ್ ಈಸ್ ಖಾನ್ ಅಂಡ್ ಐ ಆ್ಯಮ್ ನಾಟ್ ಟೆರರಿಸ್ಟ್’ಎಂದು ಶಾರುಖ್‌ ಹೇಳುವ ಡೈಲಾಗ್ ಅನ್ನು ಕೇಜ್ರಿವಾಲ್ ನೀಡಿರುವ ಹೇಳಿಕೆ ಹೋಲುತ್ತಿದೆ.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 6 ತಿಂಗಳ ಕಾಲ ಜೈಲಿನಲ್ಲಿದ್ದ ಸಂಜಯ್ ಸಿಂಗ್, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಜೈಲಿನಲ್ಲಿ ಪ್ರತಿಯೊಬ್ಬ ಕೈದಿಯನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಯಾರೊಬ್ಬರಿಗೂ ತಾರತಮ್ಯ ಮಾಡಿಲ್ಲ ಎಂದು ತಿಹಾರ್ ಜೈಲಿನ ಡಿಜಿ ಸಂಜಯ್ ಬನಿವಾಲ್ ಹೇಳಿದ್ದಾರೆ.

ಸೋಮವಾರ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದ ಮಾನ್, ಕ್ರಿಮಿನಲ್‌ಗಳು ಪಡೆಯುತ್ತಿರುವ ಸೌಲಭ್ಯವನ್ನೂ ಕೇಜ್ರಿವಾಲ್‌ಗೆ ನೀಡಲಾಗುತ್ತಿಲ್ಲ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜೈಲಿನ ಡಿಜಿ, ಯಾವೊಬ್ಬ ಕೈದಿಗೂ ವಿಶೇಷ ಸೌಲಭ್ಯ ನೀಡಿಲ್ಲ. ಆ ರೀತಿಯ ಅವಕಾಶವೂ ಇಲ್ಲ. ಜೈಲಿನಲ್ಲಿ ಹಾರ್ಡ್‌ಕೋರ್ ಅಥವಾ ಸಾಮಾನ್ಯ ಕ್ರಿಮಿನಲ್ ಎಂಬ ಭೇದವಿಲ್ಲ, ಜೈಲು ಕೈಪಿಡಿಯ ಪ್ರಕಾರ, ಕೈದಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಪ್ರತಿಯೊಬ್ಬ ಕೈದಿಯೂ ಮೂಲಭೂತ ಹಕ್ಕುಗಳನ್ನು ಹೊಂದಿದ್ದಾನೆ. ಅದನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT