ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಕಾರ್ಯದ ಸಿಬ್ಬಂದಿ ಕೌಶಲ ಹೆಚ್ಚಳಕ್ಕೆ ಮುಂದಾದ ಎನ್‌ಡಿಆರ್‌ಎಫ್‌

ಮೃತರ ಗೌರವಕ್ಕೆ ಧಕ್ಕೆ ತಡೆಯುವ ಉದ್ದೇಶ
Published 3 ಮಾರ್ಚ್ 2024, 12:52 IST
Last Updated 3 ಮಾರ್ಚ್ 2024, 12:52 IST
ಅಕ್ಷರ ಗಾತ್ರ

ನವದೆಹಲಿ: ಸಂಕಷ್ಟ– ವಿಪತ್ತುಗಳ ಸಂದರ್ಭದಲ್ಲಿ ಜನರ ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುವ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯು (ಎನ್‌ಡಿಆರ್‌ಎಫ್‌), ಮೃತಪಟ್ಟವರ ಗುರುತನ್ನು ನಿಖರವಾಗಿ ಗುರುತಿಸುವುದು ಹಾಗೂ ಮೃತದೇಹಗಳ ಗೌರವಕ್ಕೆ ಚ್ಯುತಿ ತರದಂತೆ ನೋಡಿಕೊಳ್ಳುವುದಕ್ಕಾಗಿ ತನ್ನ ಸಿಬ್ಬಂದಿಗೆ ತರಬೇತಿ ನೀಡುತ್ತಿದೆ.

ಸಂತ್ರಸ್ತರ ಗುರುತು ಪತ್ತೆಗೆ ಸಂಬಂಧಿಸಿದ ವಿಧಿವಿಜ್ಞಾನ ಕ್ರಮಗಳು ಹಾಗೂ ಶ್ವಾನಗಳಿಗೆ ತರಬೇತಿ ನೀಡುವುದಕ್ಕಾಗಿ ಹೊಸ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್‌ಡಿಆರ್‌ಎಫ್‌ನ ಮಹಾನಿರ್ದೇಶಕ ಅತುಲ್‌ ಕರ್ವಾಲ್‌ ಹೇಳಿದ್ದಾರೆ.

ಈ ಎರಡು ಮಹತ್ವದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ‘ಸಂತ್ರಸ್ತರ ಗುರುತು ಪತ್ತೆ’  ಎಂಬ ನೂತನ ಘಟಕವನ್ನು ಎನ್‌ಡಿಆರ್‌ಎಫ್‌ಗೆ ಸೇರ್ಪಡೆ ಮಾಡಲಾಗಿದೆ ಎಂದು ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಪಘಾತಗಳು ಮತ್ತು ವಿಕೋಪಗಳ ಸಂದರ್ಭಗಳಲ್ಲಿ ಮೃತದೇಹಗಳನ್ನು ಹೊರ ತೆಗೆಯುವ ಬಗೆ, ನಂತರ ದೇಹಗಳು ಕೊಳೆಯದಂತೆ ಅಥವಾ ಛಿದ್ರಗೊಳ್ಳದಂತೆ ನೋಡಿಕೊಳ್ಳುವ ಕುರಿತು ತರಬೇತಿ ನೀಡಲಾಗಿದೆ. ಸಾಂಕ್ರಾಮಿಕ ರೋಗಗಳಿಂದಾಗಿ ಮೃತಪಟ್ಟವರ ದೇಹಗಳನ್ನು ಚೀಲಗಳಲ್ಲಿ ಮುಚ್ಚಿಡುವುದು, ದೇಹಗಳಿಂದ ಸೋಂಕು ಪ್ರಸರಣವಾಗುವುದನ್ನು ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

‘ಸಂತ್ರಸ್ತರ ಗುರುತು ಪತ್ತೆ ಹಚ್ಚುವುದಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ಕೋರ್ಸ್‌ಅನ್ನು ಶೀಘ್ರವೇ ಆರಂಭಿಸಲಾಗುತ್ತದೆ. ಬಾಲೇಶ್ವರದಲ್ಲಿ ಸಂಭವಿಸಿದ ರೈಲು ಅಪಘಾತದ ವೇಳೆ ಮೃತರ ಗುರುತು ಪತ್ತೆ ಹಚ್ಚುವ ವಿಷಯವಾಗಿ ನಾವು ಸಾಕಷ್ಟು ಹೊಸ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಈ ಅಂಶಗಳನ್ನು ಈ ಕೋರ್ಸ್‌ ಒಳಗೊಂಡಿರುತ್ತದೆ’ ಎಂದು ಕರ್ವಾಲ್‌ ತಿಳಿಸಿದ್ದಾರೆ.

ಮೃತದೇಹಗಳ ಪತ್ತೆಗೆ ನಿಯೋಜಿಸುವ ಶ್ವಾನಗಳಿಗೆ ತರಬೇತಿ ನೀಡುವ ಕುರಿತು ಪರಾಮರ್ಶೆ ನಡೆಯುತ್ತಿದೆ. ನೀರಿನಲ್ಲಿ ಮುಳುಗಿದವರ ಪತ್ತೆ, ತೀವ್ರ ಸ್ವರೂಪದ ಭೂಕಂಪನ ವೇಳೆ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಮೃತರ ದೇಹಗಳ ವಾಸನೆ ಗ್ರಹಿಸಿ, ಪತ್ತೆ ಮಾಡುವ ನಿಟ್ಟಿನಲ್ಲಿ ಶ್ವಾನಗಳಿಗೆ ತರಬೇತಿ ನೀಡುವ ಯೋಚನೆ ಇದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT