ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗೀಸ್ ಆಡಳಿತದ ಕುರುಹು ಅಳಿಸಿಹಾಕುವ ಅಗತ್ಯವಿದೆ: ಗೋವಾ ಸಿಎಂ ಸಾವಂತ್

ಗೋವಾದಲ್ಲಿ ಹಿಂದೂ ದೇವಾಲಯಗಳನ್ನು ಉಳಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸಾಂಬಾಜಿಗೆ ಸಲ್ಲಬೇಕು
Published 8 ಜೂನ್ 2023, 6:29 IST
Last Updated 8 ಜೂನ್ 2023, 6:29 IST
ಅಕ್ಷರ ಗಾತ್ರ

ಪಣಜಿ: ’ಗೋವಾಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದಿದ್ದು, ಇಲ್ಲಿ ಈಗಲೂ ಉಳಿದಿರುವ ಪೋರ್ಚುಗೀಸರ ಗುರುತುಗಳನ್ನು ಅಳಿಸಿಹಾಕಿ, ಹೊಸತನ್ನು ಆರಂಭಿಸಬೇಕಿದೆ‘ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

’ಪೋರ್ಚುಗೀಸ್ ಆಡಳಿತದಲ್ಲಿ ದೇವಾಲಯಗಳಿಗೆ ಆಗುತ್ತಿದ್ದ ಹಾನಿಯನ್ನು ಛತ್ರಪತಿ ಶಿವಾಜಿ ಮಹಾರಾಜರು ತಡೆದಿದ್ದರು. ದೇಶದಲ್ಲಿ ’ಸ್ವರಾಜ್‘ ಎಂಬ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದ್ದೇ ಶಿವಾಜಿ ಮಹಾರಾಜರು. ಭಾರತೀಯ ಸೇನೆಯು ನಡೆಸಿದ ’ಆಪರೇಷನ್ ವಿಜಯ್‘ ಕಾರ್ಯಾಚರಣೆ ಮೂಲಕ 450 ವರ್ಷಗಳ ಪೋರ್ಚುಗೀಸರ ಆಡಳಿತ 1961ರ ಡಿ. 19ರಂದು ಕೊನೆಯಾಗಿತ್ತು. ಹೀಗಾಗಿ 1963ರಲ್ಲಿ ಗೋವಾ ವಿಧಾನಸಭೆಗೆ ಮೊದಲ ಚುನಾವಣೆ ನಡೆದಿತ್ತು‘ ಎಂದು ಮೆಲುಕು ಹಾಕಿದರು.

’ಶಿವಾಜಿ ಮಹಾರಾಜರಿಂದಾಗಿ ರಾಜ್ಯದ ಕರಾವಳಿ ಭಾಗದಲ್ಲಿನ ದೇವಾಲಯಗಳು ಮತ್ತಷ್ಟು ಹಾನಿಗೀಡಾಗುವುದು ತಪ್ಪಿತು. ಗೋವಾದ ಉತ್ತರ ಭಾಗದಲ್ಲಿರುವ ಸಪ್ತಕೋಟೇಶ್ವರ ದೇವಾಲಯಕ್ಕೆ ಹಾನಿ ಮಾಡುವುದನ್ನು ನಿಲ್ಲಿಸುವಂತೆ ಶಿವಾಜಿ ಮಹಾರಾಜರು ಪೋರ್ಚುಗೀಸರಿಗೆ ಎಚ್ಚರಿಕೆ ನೀಡಿದ್ದರು. ಗೋವಾದಲ್ಲಿ ಹಿಂದೂ ದೇವಾಲಯಗಳನ್ನು ಉಳಿಸಿದ ಕೀರ್ತಿ ಶಿವಾಜಿ ಮಹಾರಾಜರು ಹಾಗೂ ಅವರ ಮಗ ಸಾಂಬಾಜಿಗೆ ಸಲ್ಲಬೇಕು‘ ಎಂದು ಸಾವಂತ್ ಬಣ್ಣಿಸಿದರು.

’60 ವರ್ಷಗಳ ನಂತರವೂ ಗೋವಾದಲ್ಲಿ ಉಳಿದಿರುವ ಪೋರ್ಚುಗೀಸರ ಕುರುಹುಗಳನ್ನು ಅಳಿಸಿಹಾಕಿ, ಹೊಸತನ್ನು ಆರಂಭಿಸಬೇಕಿದೆ. ಭಾರತ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯಲ್ಲಿದೆ. ಹೀಗಾಗಿ ಭಾರತ 100ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆ ಆಚರಿಸುವ ಸಂದರ್ಭದಲ್ಲಿ ಗೋವಾ ಹೇಗಿರಬೇಕು ಎಂಬುದನ್ನು ನಾವು ಈಗಿನಿಂದಲೇ ಯೋಚಿಸಬೇಕು‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT