ಗಯಾ(ಬಿಹಾರ): ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗಯಾದ ಎ.ಪಿ ಕಾಲೋನಿ ಪ್ರದೇಶದಲ್ಲಿರುವ ಜೆಡಿಯು ಮಾಜಿ ವಿಧಾನ ಪರಿಷತ್ ಸದಸ್ಯೆ ಮನೋರಮಾ ದೇವಿ ಅವರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ದಾಳಿ ನಡೆಸಿದೆ.
ಮನೋರಮಾ ದೇವಿ ಮತ್ತು ಉದ್ಯಮಿ ದ್ವಾರಿಕಾ ಯಾದವ್ ಅವರ ನಿವಾಸದಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾಳಿ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಗಯಾ ಎಸ್‌ಎಸ್‌ಪಿ ಆಶಿಶ್ ಭಾರ್ತಿ, ‘ಶೋಧ ಕಾರ್ಯಕ್ಕಾಗಿ ಭದ್ರತಾ ಸಿಬ್ಬಂದಿ ಒದಗಿಸುವಂತೆ ಜಿಲ್ಲಾ ಪೊಲೀಸರಿಗೆ ಎಎನ್‌ಐ ಮನವಿ ಮಾಡಿತ್ತು’ ಎಂದು ಹೇಳಿದರು.
ಸಿಪಿಐ ಮಾವೋವಾದಿ(ನಕ್ಸಲ್) ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಮನೋರಮಾ ದೇವಿ ಅವರ ಕುಟುಂಬ ಸದಸ್ಯರನ್ನು ಈ ಹಿಂದೆ ಬಂಧಿಸಲಾಗಿತ್ತು.