ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ಷಣಾ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: 7 ರಾಜ್ಯಗಳಲ್ಲಿ ಎನ್‌ಐಎ ಶೋಧ

ಪಾಕ್‌ ಮೂಲದ ಬೇಹುಗಾರಿಕೆ ಜಾಲದಿಂದ ರಕ್ಷಣಾ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ
Published 29 ಆಗಸ್ಟ್ 2024, 13:15 IST
Last Updated 29 ಆಗಸ್ಟ್ 2024, 13:15 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ರಹಸ್ಯ ಮಾಹಿತಿಯು ಪಾಕಿಸ್ತಾನ ಮೂಲದ ಬೇಹುಗಾರಿಕೆ ಜಾಲವೊಂದರ ಮೂಲಕ ಸೋರಿಕೆಯಾದ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಎನ್‌ಐಎ, ಈ ಸಂಬಂಧ ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಶೋಧ ನಡೆಸಿದೆ ಎಂದು ಗುರುವಾರ ಬಿಡುಗಡೆ ಮಾಡಲಾದ ಪ್ರಕಟಣೆ ತಿಳಿಸಿದೆ.

ಬೇಹುಗಾರಿಕೆ ಚಟುವಟಿಕೆ ನಡೆಸುವುದಕ್ಕಾಗಿ ಪಾಕಿಸ್ತಾನದಿಂದ ಹಣ ಪಡೆದಿದ್ದ ಶಂಕಿತ ವ್ಯಕ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ಎನ್‌ಐಎ ತಂಡಗಳು ಬುಧವಾರ ಶೋಧ ಕಾರ್ಯ ನಡೆಸಿವೆ ಎಂದು ಪ್ರಕಟಣೆ ತಿಳಿಸಿದೆ.

ಗುಜರಾತ್‌, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ ಹಾಗೂ ಹರಿಯಾಣ ರಾಜ್ಯಗಳಲ್ಲಿ ಶೋಧ ನಡೆಸಿ, 22 ಮೊಬೈಲ್‌ ಫೋನ್‌ಗಳು, ಕೆಲ ಸೂಕ್ಷ್ಮ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. 

ಭಾರತ ವಿರುದ್ಧದ ಸಂಚಿನ ಭಾಗವಾಗಿ, ನೌಕಾಪಡೆಗೆ ಸಂಬಂಧಿಸಿದ ಮಹತ್ವದ ಹಾಗೂ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತು ಎಂಬ ಆರೋಪದಡಿ 2021ರ ಜನವರಿಯಲ್ಲಿ ಆಂಧ್ರಪ್ರದೇಶದ ಪೊಲೀಸ್‌ ಇಲಾಖೆ ಪ್ರಕರಣ ದಾಖಲಿಸಿತ್ತು. 

ನಂತರ, 2023ರ ಜುಲೈನಲ್ಲಿ ಎನ್‌ಐಎ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು. ಪಾಕಿಸ್ತಾನ ಪ್ರಜೆ ಎಂದು ಗುರುತಿಸಲಾದ ಮೀರ್ ಬಲಾಜ್‌ ಖಾನ್‌ ಹಾಗೂ ಮತ್ತೊಬ್ಬನ ವಿರುದ್ಧ ಎನ್‌ಐಎ, ಕಳೆದ ಜುಲೈ 19ರಂದು ಆರೋಪಪಟ್ಟಿ ಸಲ್ಲಿಸಿತ್ತು. ಮೀರ್‌ ಖಾನ್‌ ಸದ್ಯ ತಲೆಮರೆಸಿಕೊಂಡಿದ್ದಾನೆ.

ಖಾನ್‌ ಹಾಗೂ ಬಂಧಿತನಾಗಿರುವ ಮತ್ತೊಬ್ಬ ಆರೋಪಿ ಆಕಾಶ್‌ ಸೋಳಂಕಿ, ಈ ಬೇಹುಗಾರಿಕೆ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂಬುದು ಎನ್‌ಐಎ ತನಿಖೆಯಿಂದ ತಿಳಿದುಬಂದಿತ್ತು. ನಂತರ, ಕಳೆದ ನವೆಂಬರ್‌ 6ರಂದು ಇತರ ಇಬ್ಬರು ಆರೋಪಿಗಳಾದ ಮನಮೋಹನ್‌ ಸುರೇಂದ್ರ ಪಾಂಡಾ ಹಾಗೂ ಅಲ್ವೆನ್‌ ಎಂಬುವವರ ವಿರುದ್ಧ ಎನ್‌ಐಎ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು.

‘ಪಾಂಡಾನನ್ನು ಬಂಧಿಸಲಾಗಿದ್ದರೆ, ಪಾಕಿಸ್ತಾನ ಗುಪ್ತಚರ ಸಂಸ್ಥೆ ಪರ ಕೆಲಸ ಮಾಡುತ್ತಿದ್ದ ಅಲ್ವೆನ್‌ ತಲೆ ಮರೆಸಿಕೊಂಡಿದ್ದಾನೆ’ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಮೇನಲ್ಲಿ, ಮತ್ತೊಬ್ಬ ಆರೋಪಿ ಅಮಾನ್‌ ಸಲೀಮ್ ಶೇಖ್‌ ವಿರುದ್ಧ ಎನ್‌ಐಎ 2ನೇ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT