ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

JDUಗೆ ಮತ್ತೆ ನಿತೀಶ್‌ ಸಾರಥ್ಯ: ಪಕ್ಷದ ಮೇಲಿನ ಹಿಡಿತ ಬಲಗೊಳಿಸಲು ಯತ್ನ?

Published 29 ಡಿಸೆಂಬರ್ 2023, 15:55 IST
Last Updated 29 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷದ ಅಧ್ಯಕ್ಷರಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅವರ ಅವಿರೋಧ ಆಯ್ಕೆ ನಡೆಯಿತು.

ನಿತೀಶ್‌ ಅವರ ಆಪ್ತ ಲಲನ್‌ ಸಿಂಗ್‌, ಶುಕ್ರವಾರ ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ನಿತೀಶ್‌ ಆಯ್ಕೆ ನಡೆದಿದೆ. ಇದರೊಂದಿಗೆ ಪಕ್ಷದ ಅಧ್ಯಕ್ಷರ ಆಯ್ಕೆ ಕುರಿತಂತೆ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಈ ಬೆಳವಣಿಗೆ ನಡೆದಿದೆ.

ಪಕ್ಷದ ಮೇಲಿನ ಹಿಡಿತ ಬಲಗೊಳಿಸಲು ಮತ್ತು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ನಾಯಕತ್ವ ಸ್ಥಾನಕ್ಕೆ ತೆರೆಮರೆಯಲ್ಲೇ ನಡೆಯುತ್ತಿರುವ ಹೋರಾಟದಲ್ಲಿ ತಮ್ಮ ಪ್ರಭಾವ ಹೆಚ್ಚಿಸುವ ಭಾಗವಾಗಿ ಬಿಹಾರ ಸಿ.ಎಂ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 

‘ಸಭೆಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಲಲನ್‌ ಅವರು, ಅಧ್ಯಕ್ಷ ಸ್ಥಾನಕ್ಕೆ ನಿತೀಶ್‌ ಹೆಸರು ಸೂಚಿಸಿದರು. ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸ್ವೀಕರಿಸಲು ನಿತೀಶ್‌ ಒಪ್ಪಿಕೊಂಡರು’ ಎಂದು ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು. ಮಧ್ಯಾಹ್ನ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ನಿತೀಶ್‌ ಅವರ ಆಯ್ಕೆಯನ್ನು ಅನುಮೋದಿಸಲಾಯಿತು. 

‘ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳಲು ಉತ್ಸುಕನಾಗಿಲ್ಲ. ಆದರೆ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ’ ಎಂದು ನಿತೀಶ್‌ ಅವರು ಸಭೆಯಲ್ಲಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿದ್ದು, ಇಂತಹ ‌ಮಹತ್ವದ ಘಟ್ಟದಲ್ಲಿ ಜನಪ್ರಿಯ ನಾಯಕರಾಗಿರುವ ನಿತೀಶ್‌ ಅವರು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಪಕ್ಷದ ಬಹುತೇಕ ನಾಯಕರು ಅಭಿಪ್ರಾಯಪಟ್ಟಿದ್ದಾಗಿ ಮೂಲಗಳು ಹೇಳಿವೆ. 

ಲಲನ್‌ ಸಿಂಗ್‌ ಅವರ ನಾಯಕತ್ವ ಶೈಲಿಯನ್ನು ಕೆಲವು ನಾಯಕರು ಟೀಕಿಸಿದ್ದರಲ್ಲದೆ, ನಿತೀಶ್‌ ಬಳಿಯಲ್ಲೂ ತಮ್ಮ ಅಸಮಾಧಾನ ತೋಡಿಕೊಂಡಿದ್ದರು ಎನ್ನಲಾಗಿದೆ. 

ಪಕ್ಷದಲ್ಲಿ ಒಡಕು ಮೂಡಿದೆ ಎಂಬ ವರದಿಗಳ ನಡುವೆಯೇ, ಮುಖ್ಯಮಂತ್ರಿ ಅವರು ಲಲನ್‌ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬಂತೆ ಬಿಂಬಿಸಿ ಒಗ್ಗಟ್ಟಿನ ಚಿತ್ರಣ ಮೂಡಿಸುವ ಕೆಲಸ ಮಾಡಿದ್ದರು. 

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಲಲನ್‌ ಸಿಂಗ್ ರಾಜೀನಾಮೆ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಬೆಳವಣಿಗೆ
ನಾಯಕತ್ವ ಬದಲಾವಣೆ ಜೆಡಿಯುನ ಆಂತರಿಕ ವಿಚಾರ. ಆದರೆ ಈ ಬೆಳವಣಿಗೆಯು ಪಕ್ಷದಲ್ಲಿರುವ ಗೊಂದಲ ಅಪನಂಬಿಕೆ ಮತ್ತು ಆಂತರಿಕ ಕಲಹವನ್ನು ಬಯಲು ಮಾಡಿದೆ 
ವಿಜಯಕುಮಾರ್‌ ಸಿನ್ಜಾ ಬಿಜೆಪಿ ಶಾಸಕ ಹಾಗೂ ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ
ಆರ್‌ಜೆಡಿಗೆ ಹತ್ತಿರವಾಗಿದ್ದ ಲಲನ್ 
ಲಲನ್‌ ಸಿಂಗ್‌ ಅವರು ಲಾಲು ಪ್ರಸಾದ್‌ ಅವರ ಆರ್‌ಜೆಡಿಗೆ ಹೆಚ್ಚು ಹತ್ತಿರವಾಗುತ್ತಿದ್ದು ಇದೇ ಕಾರಣದಿಂದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪಕ್ಷದ ಮೂಲಗಳು ಇದನ್ನು ತಳ್ಳಿಹಾಕಿದ್ದು ‘ಲಲನ್‌ ದಶಕಗಳಿಗೂ ಅಧಿಕ ಸಮಯದಿಂದ ನಿತೀಶ್‌ ಅವರಿಗೆ ಆಪ್ತರಾಗಿದ್ದಾರೆ’ ಎಂದಿವೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಕಡೆ ಗಮನಹರಿಸುವ ಉದ್ದೇಶದಿಂದ ಲಲನ್‌ ಅವರು ಅಧ್ಯಕ್ಷ ಸ್ಥಾನ ತೊರೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT