ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತದಾನ ಮಾಹಿತಿ ಬಿಡುಗಡೆಯಲ್ಲಿ ವಿಳಂಬ ಆಗಿಲ್ಲ: ಚುನಾವಣಾ ಆಯೋಗ

Published 25 ಮೇ 2024, 16:13 IST
Last Updated 25 ಮೇ 2024, 16:13 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಕುಚೋದ್ಯದ ಸಂಚು ನಡೆದಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಚುನಾವಣಾ ಪ್ರಕ್ರಿಯೆ ಕುರಿತು ಸುಳ್ಳು ಸಂಕಥನ ಸೃಷ್ಟಿಸುವ ಕೆಲಸವನ್ನು ನಿರ್ದಿಷ್ಟ ಸ್ವರೂಪದಲ್ಲಿ ನಡೆಸಲಾಗುತ್ತಿದೆ ಎಂದು ಅದು ಆರೋಪಿಸಿದೆ.

ಚಲಾವಣೆಯಾದ ಮತಗಳ ಸಂಖ್ಯೆಯನ್ನು ಬದಲಾಯಿಸುವುದಕ್ಕೆ ಅವಕಾಶವೇ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಮೊದಲ ಐದು ಹಂತಗಳ ಮತದಾನದ ವೇಳೆ ಚಲಾವಣೆ ಆಗಿರುವ ಮತಗಳ ಲೆಕ್ಕ ನೀಡುವ ಜೊತೆಯಲ್ಲೇ ಆಯೋಗವು ಈ ಮಾತುಗಳನ್ನು ಹೇಳಿದೆ.

ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಪ್ರಕಟಿಸುವಂತೆ ಆಯೋಗಕ್ಕೆ ಸೂಚಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಮಾರನೆಯ ದಿನವೇ ಆಯೋಗವು ಈ ಲೆಕ್ಕವನ್ನು ತಾನಾಗಿಯೇ ನೀಡಿದೆ.

ಮತದಾನದ ಪ್ರಮಾಣವನ್ನು ನೀಡುವ ವಿಧಾನವನ್ನು ಇನ್ನಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿರುವ ಆಯೋಗವು, ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದವರ ನಿಖರ ಸಂಖ್ಯೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ. ಮತದಾನದ ಪ್ರಮಾಣವನ್ನು ಆಯೋಗವು ಪ್ರಕಟಿಸುತ್ತ ಬಂದಿದೆಯಾದರೂ, ಪ್ರತಿ ಹಂತದಲ್ಲಿ ಮತದಾನ ಮಾಡಿದವರ ಸಂಖ್ಯೆಯನ್ನು ಪ್ರಕಟಿಸಬೇಕು ಎಂಬ ಬೇಡಿಕೆಗಳು ಇದ್ದವು.

ಮತ ಚಲಾವಣೆಗೆ ಸಂಬಂಧಿಸಿದ ದತ್ತಾಂಶವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನದಿಂದಲೂ ನಿಖರವಾಗಿದೆ, ಖಚಿತವಾಗಿದೆ, ಚುನಾವಣೆಗೆ ಸಂಬಂಧಿಸಿದ ಕಾನೂನುಗಳಿಗೆ ಅನುಗುಣವಾಗಿದೆ, ಯಾವುದೇ ರೀತಿಯ ವ್ಯತ್ಯಾಸಗಳು ಆಗಿಲ್ಲ ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT