ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ದಿನಕ್ಕೆ 5.4 ಸೆಂ.ಮೀ ಕುಸಿದ ಜೋಶಿಮಠ: ಇಸ್ರೊ ಉಪಗ್ರಹದ ಚಿತ್ರಗಳಲ್ಲಿ ದೃಢ

Last Updated 13 ಜನವರಿ 2023, 18:18 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡದ ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ. ತ್ವರಿತಗತಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಇದು ಎಚ್ಚರಿಕೆಯ ಗಂಟೆ ಬಾರಿಸಿದೆ.

ಜೋಶಿಮಠದಲ್ಲಿ ಜನವರಿ 2ರಂದು ಸಂಭವಿಸಿದ ಭೂಕುಸಿತದಿಂದ ಪಟ್ಟಣದ ಜನವಸತಿ ಪ್ರದೇಶದ ಕುಸಿಯುವಿಕೆ ವೇಗ ತೀವ್ರಗೊಮಂಡಿದೆ. ಪ್ರಸಿದ್ಧ ಯಾತ್ರಾ ತಾಣಗಳಾದ ಬದರೀನಾಥ ಮತ್ತು ಹೇಮಕುಂಡ್‌ ಸಾಹೀಬ್‌ ಹಾಗೂ ಅಂತರರಾಷ್ಟ್ರೀಯ ಸ್ಕೀಯಿಂಗ್‌ ಕ್ರೀಡೆಯ ಗಮ್ಯತಾಣ ಔಲಿಯ ಹೆಬ್ಬಾಗಿಲು ಎನಿಸಿರುವ ಈ ಪಟ್ಟಣದ ಅಸ್ತಿತ್ವಕ್ಕೆ ಭೂಕುಸಿತದ ಸಮಸ್ಯೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಹಿಮಾಲಯ ಪರ್ವತಶ್ರೇಣಿಯ ಈ ಪಟ್ಟಣದಲ್ಲಿ 2022 ಏಪ್ರಿಲ್‌ ಮತ್ತು ನವೆಂಬರ್‌ ನಡುವೆ ಭೂಕುಸಿತ ನಿಧಾನದಲ್ಲಿತ್ತು. ಈ ಅವಧಿಯಲ್ಲಿ 8.9 ಸೆಂ.ಮೀಯಷ್ಟು ಕುಸಿದಿರುವುದು ಇಸ್ರೊದ ರಾಷ್ಟ್ರೀಯ ದೂರಸಂವೇದಿ ಕೇಂದ್ರದ (ಎನ್‌ಆರ್‌ಎಸ್‌ಸಿ) ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿತ್ತು. ಆದರೆ, 2022ರ ಡಿಸೆಂಬರ್ 27ರಿಂದ 2023ರ ಜ.8ರ ನಡುವೆ ಭೂ ಕುಸಿತದ ವೇಗ ತೀವ್ರಗೊಂಡಿದೆ. ಕೇವಲ 12 ದಿನಗಳಲ್ಲಿ ವ್ಯಾಪಕ ಪ್ರಮಾಣದ ಕುಸಿತವಾಗಿದೆ.

‘ಈ ಪ್ರದೇಶವು ಕೆಲವೇ ದಿನಗಳಲ್ಲಿ 5 ಸೆಂ.ಮೀ. ಕುಸಿದಿದೆ. ಇದರ ವ್ಯಾಪ್ತಿ ವಾಸಸ್ಥಳ ಹೆಚ್ಚು ಆವರಿಸಿದೆ. ಆದರೆ, ಇದು ಪಟ್ಟಣದ ಕೇಂದ್ರ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಭೂಕುಸಿತದ ಮುಕುಟ ಭಾಗ 2,180 ಮೀಟರ್ ಎತ್ತರದಲ್ಲಿ ಜೋಶಿಮಠ-ಔಲಿ ರಸ್ತೆ ಬಳಿಯ ವಸತಿ ಸ್ಥಳದಲ್ಲಿ ಗುರುತಿಸಲಾಗಿದೆ’ ಎಂದು ಎನ್ಆರ್‌ಎಸ್‌ಸಿ ವರದಿ ಹೇಳಿದೆ.

ಇಸ್ರೊ ಬಿಡುಗಡೆ ಮಾಡಿರುವ ಈ ಚಿತ್ರಗಳಲ್ಲಿ ಜೋಶಿಮಠ ಪಟ್ಟಣದ ಕೇಂದ್ರ ಭಾಗ ವ್ಯಾಪಿಸಿರುವ ಸೇನೆಯ ಹೆಲಿಪ್ಯಾಡ್‌ ಮತ್ತು ನರಸಿಂಗ ದೇವಸ್ಥಾನ ಭೂಕುಸಿತದ ವಲಯದಲ್ಲಿ ಕಾಣಿಸಿವೆ.

ಹೆಚ್ಚು ಅಪಾಯದ ಸ್ಥಳದಿಂದ ಜನರ ಸ್ಥಳಾಂತರ ಮುಂದುವರಿದಿದೆ. ಈ ವರೆಗೆ 589 ಮಂದಿಯ 169 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 3,630 ಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ 835 ಕೊಠಡಿಗಳ ಪರಿಹಾರ ಕೇಂದ್ರಗಳನ್ನು ಜೋಶಿಮಠ ಮತ್ತು ಪಿಪಾಲ್‌ಕೋಟಿಯಲ್ಲಿ ತೆರೆಯಲಾಗಿದೆ. ಈವರೆಗೆ 42 ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹1.5 ಲಕ್ಷ ಮಧ್ಯಂತರ ಪರಿಹಾರವನ್ನು ಪಾವತಿಸಿದೆ.

ಸಂತ್ರಸ್ತರ 6 ತಿಂಗಳ ವಿದ್ಯುತ್‌, ನೀರಿನ ಶುಲ್ಕ ಮನ್ನಾ

ಡೆಹ್ರಾಡೂನ್‌: ಭೂಕುಸಿತ ಪೀಡಿತ ಜೋಶಿಮಠದಲ್ಲಿ ತೊಂದರೆಗೆ ಸಿಲುಕಿದ ಸಂತ್ರಸ್ತರಿಗೆ ಆರು ತಿಂಗಳ ವಿದ್ಯುತ್‌ ಮತ್ತು ಕುಡಿಯುವ ನೀರಿನ ಶುಲ್ಕ ಮನ್ನಾ ಮಾಡಲು, ಸಂತ್ರಸ್ತರ ಬ್ಯಾಂಕ್‌ ಸಾಲಗಳ ಮರುಪಾವತಿಯನ್ನು ಒಂದು ವರ್ಷ ತಡೆಹಿಡಿಯಲು ಉತ್ತರಾಖಂಡ ಸರ್ಕಾರ ಶುಕ್ರವಾರ ನಿರ್ಧರಿಸಿತು.

ಅಲ್ಲದೇ, ಸಂತ್ರಸ್ತ ಕುಟುಂಬಗಳ ತಲಾ ಇಬ್ಬರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ತೀರ್ಮಾನಿಸಲಾಯಿತು. ಜೋಶಿಮಠದ ಭೂಕುಸಿತಕ್ಕೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಸಂಸ್ಥೆ ಎನ್‌ಟಿಪಿಸಿ ಕಾರಣವಾಗಿದ್ದರೆ ಆ ಬಗ್ಗೆಯೂ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ. ಆದರೆ, ಈ ಪ್ರದೇಶದ ಭೂಕುಸಿತದಲ್ಲಿ ಸಂಸ್ಥೆಯ ಯಾವುದೇ ಪಾತ್ರವಿಲ್ಲವೆಂದು ವಿದ್ಯುತ್ ಸಚಿವಾಲಯಕ್ಕೆ ಎನ್‌ಟಿಪಿಸಿ ತಿಳಿಸಿದೆ.

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೇ, ಬೆಟ್ಟಗಳಲ್ಲಿರುವ ಎಲ್ಲ ಪಟ್ಟಣಗಳಿಂದ ಜನರನ್ನು ಸ್ಥಳಾಂತರಿಸುವ ಸಾಮರ್ಥ್ಯದ ಅಧ್ಯಯನಕ್ಕೂ ಸಂಪುಟ ಅನುಮೋದನೆ ನೀಡಿತು ಎಂದು ಮುಖ್ಯ ಕಾರ್ಯದರ್ಶಿ ಎಸ್‌.ಎಸ್‌. ಸಂಧು ಅವರು ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರಿ ಬ್ಯಾಂಕುಗಳು ಸಾಲಗಳ ಮರುಪಾವತಿಯನ್ನು ಒಂದು ವರ್ಷ ನಿಷೇಧಿಸುವ ನಿರ್ಧಾರ ತಕ್ಷಣವೇ ಜಾರಿಗೆ ತರಲಾಗುವುದು. ವಾಣಿಜ್ಯ ಬ್ಯಾಂಕುಗಳೂ ಇದನ್ನು ಪಾಲಿಸುವಂತೆ ಕೇಂದ್ರಕ್ಕೂ ಮನವಿ ಮಾಡಲಾಗುವುದು ಎಂದರು.

ಕೋಟಿ ಫಾರ್ಮ್, ಪಿಪಾಲ್‌ಕೋಟಿ, ಗೌಚಾರ್, ಗೌಖ್ ಸಿಲಾಂಗ್‌ ಮತ್ತು ಧಾಕ್ ಹಳ್ಳಿಗಳ ಸಂತ್ರಸ್ತರ ಪುನರ್ವಸತಿಗಾಗಿ ಸಿದ್ಧಮನೆಗಳ ನಿರ್ಮಾಣಕ್ಕೆ, ಬಾಡಿಗೆ ಮನೆಗಳಿಗೆ ಸ್ಥಳಾಂತರವಾಗುವ ಸಂತ್ರಸ್ತರಿಗೆ ತಿಂಗಳಿಗೆ ನಿಗದಿಪಡಿಸಿದ್ದ ₹4 ಸಾವಿರ ಬಾಡಿಗೆಯನ್ನು ₹5 ಸಾವಿರಕ್ಕೆ ಏರಿಸಲು ಅನುಮತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT