ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1952ರಿಂದ 2019: ಲೋಕಸಭಾ ಸ್ಪರ್ಧಿಗಳ ಸಂಖ್ಯೆ ಗಣನೀಯ ಏರಿಕೆ

Published 1 ಮಾರ್ಚ್ 2024, 14:38 IST
Last Updated 1 ಮಾರ್ಚ್ 2024, 14:38 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 1952ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಅಭ್ಯರ್ಥಿಗಳು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಂದರೆ 1952ರ ಚುನಾವಣೆಯಲ್ಲಿ 1,874 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 2019ರಲ್ಲಿ 8,039 ಅಭ್ಯರ್ಥಿಗಳು ಕಣದಲ್ಲಿದ್ದರು.

ಇದೇ ಅವಧಿಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಸರಾಸರಿ ಸಂಖ್ಯೆ 4.67ರಿಂದ 14.8ಕ್ಕೆ ಏರಿಕೆಯಾಗಿತ್ತು ಎಂದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

1977ರಲ್ಲಿ ನಡೆದ ಆರನೇ ಲೋಕಸಭೆ ಚುನಾವಣೆಯವರೆಗೂ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಸರಾಸರಿ 3ರಿಂದ 5 ಸ್ಪರ್ಧಿಗಳು ಮಾತ್ರ ಇರುತ್ತಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಸರಾಸರಿ 14.8ಕ್ಕೆ ಏರಿಕೆಯಾಗಿದೆ ಎಂದು ‘ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌’ ದತ್ತಾಂಶಗಳನ್ನು ಆಧರಿಸಿ ವಿಶ್ಲೇಷಿಸಿದೆ.

ನಿಜಾಮಾಬಾದ್‌– 185 ಅಭ್ಯರ್ಥಿಗಳು:

ಕಳೆದ ಬಾರಿ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು (ಸರಾಸರಿ 16.1) ಸ್ಪರ್ಧಿಸಿದ್ದರು. ಇಲ್ಲಿನ ನಿಜಾಮಾಬಾದ್‌ನಲ್ಲಿ ಅತಿ ಹೆಚ್ಚು ಅಂದರೆ 185 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ತೆಲಂಗಾಣದ ನಂತರ ತಮಿಳುನಾಡಿನಲ್ಲಿ ಅತಿ ಹೆಚ್ಚು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ತಮಿಳುನಾಡಿನ ಪ್ರತಿ ಕ್ಷೇತ್ರದಲ್ಲೂ ಸರಾಸರಿ ಮೂರನೇ ಎರಡರಷ್ಟು ಪಕ್ಷೇತರ ಅಭ್ಯರ್ಥಿಗಳೇ ಆಗಿದ್ದರು.

ನಿಜಾಮಾಬಾದ್‌ ನಂತರ ಎರಡನೇ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದ ಕ್ಷೇತ್ರ ಕರ್ನಾಕದ ಬೆಳಗಾವಿ. ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದ್ದ ದೇಶದ ಐದು ಕ್ಷೇತ್ರಗಳು ದಕ್ಷಿಣ ರಾಜ್ಯಗಳಾದ ತೆಲಂಗಾಣ, ಕರ್ನಾಟಕ, ತಮಿಳುನಾಡಿನಲ್ಲಿದ್ದವು.

ಬಿಜೆಪಿ ಮತ್ತು ಕಾಂಗ್ರೆಸ್‌ ಕ್ರಮವಾಗಿ 435 ಮತ್ತು 420 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಈ ಎರಡೂ ಪಕ್ಷಗಳು 373 ಕ್ಷೇತ್ರಗಳಲ್ಲಿ ನೇರ ಪೈಪೋಟಿ ಎದುರಿಸಿದ್ದವು. 2019ರ ಚುನಾವಣೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಸಿದ್ದ ಮೂರನೇ ದೊಡ್ಡ ಪಕ್ಷ ಬಿಎಸ್‌ಪಿ ಆಗಿತ್ತು. 

1977ರಲ್ಲಿ ಒಟ್ಟು 2,439, 1980ರಲ್ಲಿ 4,629, 1984–85ರಲ್ಲಿ 5,492 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 1989ರಲ್ಲಿ 6,160, 1991–92ರಲ್ಲಿ 8,668 (ಸರಾಸರಿ 15.96) ಹಾಗೂ ನಂತರದ 11ನೇ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆ ಪ್ರಮಾಣದ 13,952 ಅಭ್ಯರ್ಥಿಗಳು (ಸರಾಸರಿ 25.69) ಸ್ಪರ್ಧಿಸಿದ್ದರು.

ಭದ್ರತಾ ಠೇವಣಿ ಹೆಚ್ಚಳ:

ಕೇಂದ್ರ ಚುನಾವಣಾ ಆಯೋಗವು ಚುನಾವಣೆಯಲ್ಲಿ ಸ್ಪರ್ಧಿಸುವವರು ಇಡಬೇಕಾಗುವ ಭದ್ರತಾ ಠೇವಣಿ ಮೊತ್ತವನ್ನು ₹500ರಿಂದ ₹ 10,000ಕ್ಕೆ ಏರಿಸಿತು. ಆ ಬಳಿಕ ಅಭ್ಯರ್ಥಿಗಳ ಸ್ಪರ್ಧೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿತು.

1999ರಲ್ಲಿ 4,648, 2004ರಲ್ಲಿ 5,435 (ಸರಾಸರಿ 10), 2009ರಲ್ಲಿ 8,070 (ಸರಾಸರಿ 14.86)ಕ್ಕೆ ಏರಿಕೆ ಕಂಡು ಬಂದಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ 8,251 ಅಭ್ಯರ್ಥಿಗಳು ಕಣದಲ್ಲಿದ್ದರು ಎಂದು ಅಂಕಿ ಅಂಶಗಳು ತಿಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT