ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಂತ್‌ ಸೊರೇನ್‌ ಬಂಧನ: ಬಜೆಟ್‌ ಮಂಡನೆ ವೇಳೆ ಪ್ರತಿಭಟನೆಗೆ ವಿಪಕ್ಷಗಳ ನಿರ್ಧಾರ

Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್‌ ಸೊರೇನ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವುದನ್ನು ವಿರೋಧಿಸಿ ಸಂಸತ್‌ನಲ್ಲಿ ಬಜೆಟ್‌ ಮಂಡನೆ ವೇಳೆ ತೀವ್ರ ಪ್ರತಿಭಟನೆ ನಡೆಸಲು ವಿರೋಧ ಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ಬುಧವಾರ ಹೇಳಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ವಿರೋಧ ಪಕ್ಷಗಳ ನಾಯಕರು, ಸೊರೇನ್‌ ಬಂಧನದ ಹಿನ್ನೆಲೆಯಲ್ಲಿ ನಡೆದ ಬೆಳವಣಿಗೆಗಳ ಕುರಿತು ಚರ್ಚಿಸಿದರು ಎಂದು ತಿಳಿಸಿವೆ.

ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಡಿಎಂಕೆ ನಾಯಕ ಟಿ.ಆರ್‌.ಬಾಲು ಸಭೆಯಲ್ಲಿ ಇದ್ದರು.

ಖರ್ಗೆಯಿಂದ ಮತ್ತೊಂದು ಸಭೆ: ಬಜೆಟ್‌ ಮಂಡನೆಗೂ ಮುನ್ನ, ವಿರೋಧ ಪಕ್ಷಗಳ ಸದನ ನಾಯಕರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಹೋರಾಟದ ಕಾರ್ಯತಂತ್ರ ಕುರಿತು ಚರ್ಚಿಸಲು ಸಭೆ ನಡೆಸುವರು ಎಂದೂ ಮೂಲಗಳು ಹೇಳಿವೆ.

ರಾಹುಲ್‌ ಗಾಂಧಿ ಪೋಸ್ಟ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಹೇಮಂತ್‌ ಸೊರೇನ್‌ ಬಂಧನ ಟೀಕಿಸಿ, ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಇ.ಡಿ, ಸಿಬಿಐ, ಐಟಿ ಇಲಾಖೆಗಳು ಸರ್ಕಾರದ ಸಂಸ್ಥೆಗಳಾಗಿ ಉಳಿದಿಲ್ಲ. ಅವು ಈಗ, ಬಿಜೆಪಿಯ ‘ವಿಪಕ್ಷ ನಿರ್ಮೂಲನೆ ವಿಭಾಗ’ವಾಗಿವೆ’ ಎಂದಿದ್ದಾರೆ.

‘ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ಅಧಿಕಾರದಲ್ಲಿರುವ ಗೀಳು. ಇದಕ್ಕಾಗಿ ಅದು ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ’ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಪ್ರಕರಣ ಕುರಿತ ಬೆಳವಣಿಗೆಗಳು

* ತಮ್ಮ ಬಂಧನ ಪ್ರಶ್ನಿಸಿ ಹೇಮಂತ್‌ ಸೊರೇನ್‌ ಅವರು ಬುಧವಾರ ರಾತ್ರಿ ಜಾರ್ಖಂಡ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಂಗಾಮಿ ಮುಖ್ಯನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಅನುಭಾ ರಾವತ್‌ ಚೌಧರಿ ಅವರಿರುವ ನ್ಯಾಯಪೀಠವು ಗುರುವಾರ ಬೆಳಿಗ್ಗೆ 10.30ಕ್ಕೆ ಅರ್ಜಿ ವಿಚಾರಣೆ ನಡೆಸಲಿದೆ

* ತಮ್ಮ ದೆಹಲಿ ನಿವಾಸದಲ್ಲಿ ಶೋಧ ಕೈಗೊಂಡಿದ್ದ ಇ.ಡಿ  ಹಿರಿಯ ಅಧಿಕಾರಿಗಳ ವಿರುದ್ಧ ಹೇಮಂತ್‌ ಸೊರೇನ್‌ ಅವರು ರಾಂಚಿಯ ಎಸ್‌ಸಿ/ಎಸ್‌ಟಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಎಫ್‌ಐಆರ್‌ ದಾಖಲಾಗಿದೆ. 

* ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ತಮ್ಮನ್ನು ಬಂಧಿಸುವುದಕ್ಕೆ ಸಂಬಂಧಿಸಿದ ಮೆಮೊಗೆ ಸಹಿ ಹಾಕಲು ಹೇಮಂತ್‌ ಸೊರೇನ್‌ ನಿರಾಕರಿಸಿದರು ಎಂದು ಮೂಲಗಳು ಹೇಳಿವೆ 

* ಪ್ರಕರಣಕ್ಕೆ ಸಂಬಂಧಿಸಿ, 2011ರ ಬ್ಯಾಚ್‌ ಐಎಎಸ್‌ ಅಧಿಕಾರಿ ಛವಿ ರಂಜನ್ ಸೇರಿದಂತೆ ಜಾರಿ ನಿರ್ದೇಶನಾಲಯವು ಈ ವರೆಗೆ 14 ಮಂದಿಯನ್ನು ಬಂಧಿಸಿದೆ. ಛವಿ ರಂಜನ್‌ ಅವರು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾಗಿ, ರಾಂಚಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT