ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: ಭದ್ರತೆ ಭೇದಿಸಿ ಸದನಕ್ಕೆ ಜಿಗಿದರು!

ಐವರ ಬಂಧನ: ಸಮಗ್ರ ವಿವರ ಇಲ್ಲಿದೆ
Published 13 ಡಿಸೆಂಬರ್ 2023, 20:27 IST
Last Updated 13 ಡಿಸೆಂಬರ್ 2023, 20:27 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್‌ ಮೇಲಿನ ದಾಳಿಯ 22ನೇ ವರ್ಷಾಚರಣೆಯ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು. ಬುಧವಾರ ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ (ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್‌) ಹಾರಿಸಿ ದಾಂದಲೆ ಎಬ್ಬಿಸಿದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಯಿತು. 

ಡಿಸೆಂಬರ್‌ 13ರ ಭಯೋತ್ಪಾದಕ ದಾಳಿಯಲ್ಲಿ ಮಡಿದ ಭದ್ರತಾ ಸಿಬ್ಬಂದಿಗೆ ಸಂಸದರು ಶ್ರದ್ಧಾಂಜಲಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಾದ ಮೈಸೂರಿನ ವಿಜಯನಗರ ನಿವಾಸಿಯಾಗಿರುವ ಎಂಜಿನಿಯರಿಂಗ್ ಪದವೀಧರ ಮನೋರಂಜನ್‌ ಡಿ. ಹಾಗೂ ಲಖನೌದ ಸಾಗರ್‌ ಶರ್ಮಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಇದೇ ಸಮಯದಲ್ಲಿ ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇವರನ್ನು ಹರಿಯಾಣದ ಹಿಸಾರ್‌ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂದೆ (25) ಎಂದು ಗುರುತಿಸಲಾಗಿದೆ.

ಮೈಸೂರಿನ ಸಂಸದ ಪ್ರತಾಪ ಸಿಂಹ ಅವರ ಶಿಫಾರಸಿನ ಮೂಲಕ ಪಾಸ್‌ ಪಡೆದ ಇಬ್ಬರು ಯುವಕರು ಈ ಕೃತ್ಯ ನಡೆಸಿದ್ದಾರೆ. ಈ ಘಟನೆ ನಡೆಯುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಸದನದಲ್ಲಿ ಇರಲಿಲ್ಲ. ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಪ್ರಲ್ಹಾದ ಜೋಶಿ, ಹರದೀಪ್‌ ಸಿಂಗ್‌ ಪುರಿ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿದಂತೆ ಸುಮಾರು 100 ಸಂಸದರು ಸದನದಲ್ಲಿ ಇದ್ದರು. ಈ ದುಷ್ಕೃತ್ಯದ ಹಿಂದಿನ ಉದ್ದೇಶ ಇನ್ನೂ ತಿಳಿದು ಬಂದಿಲ್ಲ. 

ಈ ಘಟನೆಯಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಈ ಎಲ್ಲರೂ ಗುರುಗ್ರಾಮದ ಮನೆಯೊಂದರಲ್ಲಿ ತಂಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಘಟನೆ ವಿವರ: ಲೋಕಸಭೆಯಲ್ಲಿ ಮಧ್ಯಾಹ್ನ ಒಂದು ಗಂಟೆಯಲ್ಲಿ ಶೂನ್ಯವೇಳೆಯಲ್ಲಿ ಸದಸ್ಯರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಸಂದರ್ಭದಲ್ಲಿ ಸಂದರ್ಶಕರ ಗ್ಯಾಲರಿಯಿಂದ ಸದನದೊಳಕ್ಕೆ ಜಿಗಿದ ಸಾಗರ್‌ ಶರ್ಮಾ, ಸಂಸದರ ಕುರ್ಚಿ ಹಾಗೂ ಟೇಬಲ್‌ಗಳ ಮೇಲೆಲ್ಲ ಓಡಾಡಿ ಸ್ಪೀಕರ್ ಕುರ್ಚಿಯತ್ತ ಧಾವಿಸಲು ಪ್ರಯತ್ನಿಸಿದ. ಪರಿಸ್ಥಿತಿ ಅರಿತ ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಮೀರತ್‌ ಸಂಸದ ರಾಜೇಂದ್ರ ಅಗರವಾಲ್ ಅವರು ತಕ್ಷಣ ಕಲಾಪವನ್ನು ಕೆಲಕಾಲ ಮುಂದೂಡಿದರು. ಈ ವೇಳೆ ಆರೋಪಿಯನ್ನು ಸುತ್ತುವರಿದ ಕೆಲವು ಸಂಸದರು ಆತನನ್ನು ಥಳಿಸಿದರು. ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು. ಅಷ್ಟರಲ್ಲಿ ಮತ್ತೊಬ್ಬ ಆರೋಪಿ ಮನೋರಂಜನ್‌ ಸ್ಮೋಕ್ ಕ್ಯಾನ್‌ ತೆರೆದಿದ್ದರಿಂದ ಸದನದ ಒಂದು ಭಾಗದಲ್ಲಿ ಹಳದಿ ಬಣ್ಣದ ದಟ್ಟ ಹೊಗೆ ಆವರಿಸಿತು. 

ಮತ್ತೆ 2 ಗಂಟೆಗೆ ಕಲಾಪ ಆರಂಭವಾದಾಗ ಹಲವು ಸದಸ್ಯರು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಆಗ ಸ್ಪೀಕರ್‌, ‘ನಿಮಗೆಲ್ಲರಿಗೂ ಘಟನೆ ಕುರಿತು ಆತಂಕ ಇದೆ ಎಂದು ತಿಳಿದಿದೆ. ಇದು ದುರದೃಷ್ಟಕರ ಘಟನೆ. ಈ ಕುರಿತು ತನಿಖಾ ವರದಿ ಬಂದ ನಂತರ ನಾನು ಅದರ ಬಗ್ಗೆ ವಿವರಣೆ ಕೊಡಬಹುದು. ಸದನದಲ್ಲಿ ಈಗ ಇದರ ಬಗ್ಗೆ ಚರ್ಚೆ ಬೇಡ. ಮತ್ತೆ ಸಂಸದರ ಸಭೆ ಕರೆಯತ್ತೇನೆ. ಅಲ್ಲಿ ಚರ್ಚಿಸೋಣ’ ಎಂದು ಭರವಸೆ ನೀಡಿದರು. ಬಳಿಕ ಕೆಲ ಹೊತ್ತು ಕಲಾಪ ಮುಂದುವರಿಯಿತು. ಬಳಿಕ ಕಾಂಗ್ರೆಸ್‌ ಸಂಸದರು, ‘ಬಿಜೆಪಿ ಸಂಸದರಿಂದ ಪಾಸ್‌ ಪಡೆದು ಆರೋಪಿಗಳು ಸದನ ಪ್ರವೇಶಿಸಿದ್ದಾರೆ’ ಎಂದು ಗದ್ದಲ ಎಬ್ಬಿಸಿದರು. ಗಲಾಟೆ ಜೋರಾದ ಹಿನ್ನೆಲೆಯಲ್ಲಿ ಸದನದಲ್ಲಿ ಮುಂದೂಡಲಾಯಿತು.  

ಮೂರು ತಿಂಗಳಿಂದ ಪ್ರಯತ್ನ: 

ಮನೋರಂಜನ್‌ ಅವರು ಕಳೆದ ಮೂರು ತಿಂಗಳಿಂದ ಆಗಾಗ ಪ್ರತಾಪ ಸಿಂಹ ಕಚೇರಿಗೆ ಬರುತ್ತಿದ್ದ ಹಾಗೂ ಹೊಸ ಸಂಸತ್‌ ಭವನ ವೀಕ್ಷಣೆಗೆ ಪಾಸ್‌ ನೀಡುವಂತೆ ಮನವಿ ಮಾಡುತ್ತಿದ್ದ. ಸಾಗರ್‌ನನ್ನು ತನ್ನ ಸ್ನೇಹಿತ ಎಂದು ಸಂಸದರಿಗೆ ಪರಿಚಯಿಸಿದ್ದ. ಹೀಗಾಗಿ, ಅವರಿಗೆ ಪಾಸ್‌ ನೀಡಲಾಗಿತ್ತು. ಒಟ್ಟು ಮೂರು ಮಂದಿಗೆ ಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಬ್ಬ ಮಹಿಳೆ ಮಗುವಿನೊಂದಿಗೆ ಬಂದಿದ್ದರು. ಪಾಸ್‌ನಲ್ಲಿ ಮಗುವಿನ ಹೆಸರು ನಮೂದಿಸದ ಕಾರಣಕ್ಕೆ ಅವರಿಗೆ ಸಂಸತ್‌ನೊಳಗೆ ಹೋಗಲು ಸಾಧ್ಯವಾಗಲಿಲ್ಲ. ಮಹಿಳೆಗೂ ಹಾಗೂ ಬಂಧಿತ ಯುವಕರಿಗೂ ಸಂಬಂಧ ಇಲ್ಲ ಎಂದು ಮೂಲಗಳು ತಿಳಿಸಿವೆ.

ಭದ್ರತೆ ಹೆಚ್ಚಳ: 

ಘಟನೆ ನಡೆದ ಬಳಿಕ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಸಂಸತ್ತಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಸಂಸತ್‌ ಭದ್ರತೆಗೆ ಪೊಲೀಸ್‌ ಹಾಗೂ ಅರೆಸೇನಾ ಪಡೆಯ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಯಿತು. 

‘ಎರಡೂ ಘಟನೆಗಳ ತನಿಖೆಯನ್ನು ದೆಹಲಿ ಪೊಲೀಸರ ವಿಶೇಷ ಕೋಶಕ್ಕೆ ವಹಿಸಲಾಗಿದೆ. ವಿಧಿ ವಿಜ್ಞಾನ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಮತ್ತು ಭೌತಿಕ ಪುರಾವೆಗಳನ್ನು ಸಂಗ್ರಹಿಸಿವೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

‘ಇಬ್ಬರು ಯುವಕರು ಗ್ಯಾಲರಿಯಲ್ಲಿ ಕುಳಿತಿದ್ದಾಗ ಯಾವುದೇ ಘೋಷಣೆಗಳನ್ನು ಕೂಗಲಿಲ್ಲ ಮತ್ತು ಇದ್ದಕ್ಕಿದ್ದಂತೆ ಸದನದೊಳಗೆ ಜಿಗಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಸಂಸತ್ತಿನ ಹೊರಗೆ ಇಬ್ಬರ ಬಂಧನ: ಸಂಸತ್ತಿನ ಕಟ್ಟಡದ ಹೊರಗೆ ಹಳದಿ ಮತ್ತು ಕೆಂಪು ಹೊಗೆಯನ್ನು ಹೊರಸೂಸಿ ಪ್ರತಿಭಟನೆ ನಡೆಸುತ್ತಿದ್ದ ಪುರುಷ ಮತ್ತು ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಿಗಳು ‘ಸರ್ವಾಧಿಕಾರಕ್ಕೆ ಅವಕಾಶ ನೀಡುವುದಿಲ್ಲ’, ‘ಭಾರತ್ ಮಾತಾ ಕಿ ಜೈ’ ಮತ್ತು ‘ಜೈ ಭೀಮ್, ಜೈ ಭಾರತ್’ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಪೊಲೀಸರು ಕರೆದುಕೊಂಡು ಹೋಗುತ್ತಿದ್ದ ವೇಳೆ ಪ್ರತಿಕ್ರಿಯಿಸಿದ ಆರೋಪಿ ಮಹಿಳೆ, ‘ನಾವು ಯಾವುದೇ ಸಂಘಟನೆಗೆ ಸೇರಿದವರಲ್ಲ. ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳು’ ಎಂದು ಹೇಳಿದರು. 

‘ಭಾರತ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ ನಮ್ಮನ್ನು ಹೊಡೆದು ಜೈಲಿಗೆ ಹಾಕಲಾಗುತ್ತಿದೆ. ನಮ್ಮ ಪೋಷಕರು ಕೂಲಿ ಕಾರ್ಮಿಕರು, ಕೃಷಿಕರು ಹಾಗೂ ಸಣ್ಣ ಅಂಗಡಿ ಹೊಂದಿದವರು. ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ದೂರಿದರು. 

ರಾಜ್ಯಸಭೆಯಲ್ಲೂ ಪ್ರತಿಧ್ವನಿ: ಈ ಘಟನೆ ಬಗ್ಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದರು. ಇದೊಂದು ಗಂಭೀರ ಭದ್ರತಾ ಲೋಪ ಎಂದು ದೂರಿದರು. ಘಟನೆ ಕುರಿತು ಗೃಹ ಸಚಿವ ಅಮಿತ್‌ ಶಾ ಅವರು ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ರಾಜ್ಯಸಭೆಯಲ್ಲಿ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. 

ಭಯೋತ್ಪಾದಕರು 2001ರ ಡಿಸೆಂಬರ್‌ 13ರಂದು ಸಂಸತ್ತಿನ ಕಟ್ಟಡದ ಮೇಲೆ ದಾಳಿ ಮಾಡಿ ಒಂಬತ್ತು ಜನರನ್ನು ಹತ್ಯೆ ಮಾಡಿದ್ದರು. 

ವಿಪಕ್ಷಗಳ ಸಭೆ ಇಂದು

ಸಂಸತ್ತಿನಲ್ಲಿ ಭದ್ರತಾ ಲೋಪ ಕುರಿತು ತಮ್ಮ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ‘ಇಂಡಿಯಾ’ ಮೈತ್ರಿಕೂಟವು ಗುರುವಾರ ಬೆಳಿಗ್ಗೆ ಸಭೆ ನಡೆಸಲಿದ್ದು, ಈ ವಿಷಯದ ಕುರಿತು ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಯೋಜಿಸಿವೆ. 

ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ವಿರೋಧ ಪಕ್ಷಗಳು ಸಭೆ ಸೇರಿ ಚರ್ಚಿಸಲಿವೆ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದ ಸುದೀಪ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.

ಘಟನಾವಳಿಗಳು

  • ಬೆಳಿಗ್ಗೆ 9: ಸಂಸತ್‌ ಮೇಲಿನ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದವರಿಗೆ ಉಪ ರಾಷ್ಟ್ರಪತಿ, ಪ್ರಧಾನಿ, ಸ್ಪೀಕರ್ ಸೇರಿದಂತೆ ಹಿರಿಯ ನಾಯಕರಿಂದ ಶ್ರದ್ಧಾಂಜಲಿ

  • ಬೆಳಿಗ್ಗೆ 11: ಎರಡೂ ಸದನಗಳ ಕಲಾಪ ಆರಂಭ

  • ಮಧ್ಯಾಹ್ನ 12.04: ಮೀರತ್‌ ಸಂಸದ ರಾಜೇಂದ್ರ ಅಗರವಾಲ್‌ ಅವರು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಣೆ

  • ಮಧ್ಯಾಹ್ನ 1.01: ಶೂನ್ಯವೇಳೆಯಲ್ಲಿ ಟಿಎಂಸಿ ಸಂಸದ ಖಗೆನ್‌ ಮುರ್ಮು ಅವರಿಂದ ಮಾತು

  • ಮಧ್ಯಾಹ್ನ 1.02: ಮೊದಲ ಆರೋಪಿ ಸಾಗರ್‌ ಶರ್ಮಾ ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದ. ಸ್ಮೋಕ್‌ ಕ್ಯಾನ್‌ ತೆರೆದು ಸಭಾಧ್ಯಕ್ಷರ ಪೀಠದತ್ತ ಧಾವಿಸಲು ಯತ್ನ

  • ಮಧ್ಯಾಹ್ನ 1.03: ಮತ್ತೊಬ್ಬ ಆರೋಪಿ ಮನೋರಂಜನ್‌ ಸ್ಮೋಕ್‌ ಕ್ಯಾನ್‌ ತೆರೆದು ಹೊಗೆ ಹಾರಿಸಿದ. ಆರೋಪಿಗಳನ್ನು ಸುತ್ತುವರಿದ ಸಂಸದರು ಹಾಗೂ ಭದ್ರತಾ ಸಿಬ್ಬಂದಿ

  • ಮಧ್ಯಾಹ್ನ 1.07: ಸಂಸತ್‌ ಕಟ್ಟಡದ ಹೊರಗೆ ಇಬ್ಬರಿಂದ ಪ್ರತಿಭಟನೆ ಮತ್ತು ಬಂಧನ

ಪ್ರತಾಪ ಸಿಂಹ ಉಚ್ಚಾಟನೆಗೆ ವಿಪಕ್ಷ ಆಗ್ರಹ

ಕಲಾಪ ಮುಂದೂಡಿದ ಬಳಿಕ ಸ್ಪೀಕರ್ ಅವರು ಸರ್ವಪಕ್ಷ ಸಭೆ ನಡೆಸಿದರು. ಭದ್ರತಾ ಲೋಪದ ಕುರಿತು ಕೆಲವು ಸಂಸದರು ಸಭೆಯಲ್ಲಿ ಬೊಟ್ಟು ಮಾಡಿದರು. ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. 

‘ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ಮೊಯಿತ್ರಾ ಹಣ ಪಡೆದಿದ್ದಾರೆ ಎಂದು ಹೇಳಿ ಸಂಸತ್ತಿನ ನೀತಿ ಸಮಿತಿ ನೀಡಿದ್ದ ವರದಿಯನ್ನು ಅಂಗೀಕರಿಸಿದ್ದ ಲೋಕಸಭೆಯು, ಮಹುವಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಉಚ್ಚಾಟಿಸಿದೆ. ಅದೇ ರೀತಿ, ಪಾಸ್‌ ವ್ಯವಸ್ಥೆ ಮಾಡಿಸಿದ ಪ್ರತಾಪ ಸಿಂಹ ಅವರನ್ನೂ ಉಚ್ಚಾಟನೆ ಮಾಡಬೇಕು’ ಎಂದು ಕೆಲವು ಸಂಸದರು ಆಗ್ರಹಿಸಿದರು. 

‘ಡಿಸೆಂಬರ್‌ 13ರಂದು ಸಂಸತ್ತಿನ ಮೇಲೆ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆಯೊಂದು ಸಂಚು ರೂಪಿಸುತ್ತಿದೆ ಎಂಬ ಸುದ್ದಿ ಹರಡಿತ್ತು. ಈ ವಿಷಯ ಸರ್ಕಾರಕ್ಕೂ ಗೊತ್ತಿತ್ತು. ಆದರೂ, ಇಂತಹ ಲೋಪ ಏಕೆ ಸಂಭವಿಸಿತು’ ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್ ರಂಜನ್‌ ಚೌಧರಿ ಪ್ರಶ್ನಿಸಿದರು.

‘ಕಲಾಪದೊಳಗೆ ನುಗ್ಗಿ ದವರಿಗೆ ಪಾಸ್‌ಗಳನ್ನು ಒದಗಿಸುವ ಮೂಲಕ ಪ್ರತಾಪ ಸಿಂಹ ಅವರು ಸಂಸತ್‌ ಅನ್ನು ಅ‍ಪಾಯಕ್ಕೆ ದೂಡಿ ದ್ದಾರೆ’ ಎಂದು ಟಿಎಂಸಿ ಹೇಳಿದೆ.

ಪ್ರತಾಪ ಸಿಂಹ ಅವರು ಪಾಸ್ ನೀಡುವಾಗ ಎಚ್ಚರಿಕೆ ವಹಿಸಬೇಕಿತ್ತು. ಅವರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ.
ಡಿ.ಕೆ. ಸುರೇಶ್‌, ಬೆಂಗಳೂರು ಗ್ರಾಮಾಂತರ ಸಂಸದ
ಅಪರಿಚಿತ ವ್ಯಕ್ತಿಗಳಿಬ್ಬರು ಶೂನಲ್ಲಿ ಗ್ಯಾಸ್‌ ಕ್ಯಾನ್‌ಗಳನ್ನು ಅಡಗಿಸಿಟ್ಟುಕೊಂಡಿದ್ದರು. ಅದರಿಂದ ಹಳದಿ ಬಣ್ಣದ ಹೊಗೆ ಸಿಂಪಡಿಸಿದರು. ಒಬ್ಬ ಆರೋಪಿ ಸರ್ವಾಧಿಕಾರಿ ಆಡಳಿತ ನಡೆಯುವುದಿಲ್ಲ ಎಂದು ಘೋಷಣೆ ಕೂಗಿದ್ದಾನೆ.
ರಾಮಪ್ರೀತ್‌ ಮಂಡಲ್‌, ಜೆಡಿಯು ಸಂಸದ
ಇಬ್ಬರು ಯುವಕರು ಹಳದಿ ಬಣ್ಣದ ಅನಿಲವನ್ನು ಸಿಂಪಡಿಸಿದರು. ಅದು ದುರ್ವಾಸನೆ ಬೀರುತ್ತಿತ್ತು. ಸಂಸದರು ಅವರನ್ನು ಹಿಡಿಯಲು ಧಾವಿಸಿದರು. ಒಬ್ಬ ವ್ಯಕ್ತಿ ಕೆಲವು ಘೋಷಣೆಗಳನ್ನು ಕೂಗಿದ. ಇದು ಹೊಸ ಸಂಸತ್‌ ಭವನದ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಗೌರವ್‌ ಗೊಗೋಯ್‌, ಕಾಂಗ್ರೆಸ್‌ ಸಂಸದ
ಸಾಗರ್ ಎಂಬಾತ ಸಂಸದ ಪ್ರತಾಪ ಸಿಂಹ ಪಾಸ್ ಮೇಲೆ ಪ್ರವೇಶ ಪಡೆದಿದ್ದ. ಇದೊಂದು ದೊಡ್ಡ ಭದ್ರತಾ ಲೋಪ. ಸಂಸತ್ ಭವನದ ಮೇಲಿನ ದಾಳಿ ನಡೆದ ದಿನವೇ ಈ ಲೋಪ ಆಗಿದೆ. ಈ ಬಗ್ಗೆ ತನಿಖೆ ನಡೆಯಬೇಕು.
ಡ್ಯಾನಿಶ್‌ ಅಲಿ, ಬಿಎಸ್‌ಪಿಯಿಂದ ಅಮಾನತಾದ ಸಂಸದ
ಗೃಹ ಸಚಿವ ಅಮಿತ್‌ ಶಾ ಅವರು ದೊಡ್ಡದಾಗಿ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ, ಅವರಿಗೆ ಸಂಸತ್ತಿನಲ್ಲಿ ಭದ್ರತೆಯನ್ನು ಕಾಪಾಡಲು ಸಾಧ್ಯವಾಗಿಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು.
ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸಂಸದ
ಸದನದಲ್ಲಿ ಇದ್ದಕ್ಕಿದ್ದಂತೆ ಗೊಂದಲ ವಾತಾವರಣ ನಿರ್ಮಾಣವಾಯಿತು. ಒಬ್ಬ ವ್ಯಕ್ತಿ ಒಂದು ಬೆಂಚ್‌ನಿಂದ ಮತ್ತೊಂದಕ್ಕೆ ಜಿಗಿಯುತ್ತಿರುವುದನ್ನು ಗಮನಿಸಿದೆವು. ಅದು ಅತ್ಯಂತ ಗಾಬರಿಯ ಕ್ಷಣವಾಗಿತ್ತು. ಏನು ಬೇಕಾದರೂ ಆಗಬಹುದಿತ್ತು. ಒಂದು ಪಕ್ಷ ಅವನು ತನ್ನ ಪಾಕೆಟ್‌ನಲ್ಲಿ ಬಾಂಬ್‌ ಅಥವಾ ಬೆಂಕಿ ಹಚ್ಚುವ ಸಾಧನಗಳನ್ನು ಇಟ್ಟುಕೊಂಡಿದ್ದರೆ ಗತಿಯೇನು?
ಸುದೀಪ್‌ ಬಂದೋಪಾಧ್ಯಾಯ, ಟಿಎಂಸಿ ಸಂಸದ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT