ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನಲ್ಲಿ ಭದ್ರತಾ ವೈಫಲ್ಯ: ತೆಲಂಗಾಣ ವಿಧಾನಸಭೆ ಅಧಿವೇಶನಕ್ಕೆ ಬಿಗಿ ಭದ್ರತೆ

Published 14 ಡಿಸೆಂಬರ್ 2023, 6:41 IST
Last Updated 14 ಡಿಸೆಂಬರ್ 2023, 6:41 IST
ಅಕ್ಷರ ಗಾತ್ರ

ಹೈದರಾಬಾದ್‌: ಸಂಸತ್ತಿನಲ್ಲಿ ಕಲಾಪ ನಡೆಯುತ್ತಿದ್ದಾಗಲೇ ಉಂಟಾಗಿರುವ ಭದ್ರತಾ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಸರ್ಕಾರ, ವಿಧಾನಸಭೆ ಅಧಿವೇಶನಕ್ಕೆ ಬಿಗಿ ಭದ್ರತೆ ಕಲ್ಪಿಸಲು ಕ್ರಮ ಕೈಗೊಂಡಿದೆ.

ವಿಧಾನಸಭೆಯ ಹಂಗಾಮಿ ಸ್ಪೀಕರ್ ಅಕ್ಬರುದ್ದೀನ್ ಒವೈಸಿ ಹಾಗೂ ವಿಧಾನ ಪರಿಷತ್‌ ಸಭಾಪತಿ ಗುಪ್ತಾ ಸುಖೇಂದರ್‌ ರೆಡ್ಡಿ ನೇತೃತ್ವದಲ್ಲಿ ಈ ಕುರಿತು ಬುಧವಾರ ಸಭೆ ನಡೆದಿದೆ. ಶಾಸಕಾಂಗ ವ್ಯವಹಾರಗಳ ಸಚಿವ ಡಿ.ಶ್ರೀಧರ್‌ ಬಾಬು, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ಇತರ ಹಿರಿಯ ಪೊಲೀಸ್‌ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಭೆ ವೇಳೆ ಒವೈಸಿ ಅವರು, ಸಂಸತ್‌ನಲ್ಲಿ ಉಂಟಾದ ಭದ್ರತಾ ವೈಫಲ್ಯವನ್ನು ಖಂಡಿಸಿದ್ದಾರೆ. ವಿಧಾನಸಭೆ ಅಧಿವೇಶನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಮೂರು ಹಂತದ ಬಿಗಿ ಭದ್ರತಾ ವ್ಯವಸ್ಥೆ ರೂಪಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶ್ರೀಧರ್‌ ಬಾಬು ಕಚೇರಿ ಬುಧವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದೆ.

ವಿಧಾನಸಭೆಗೆ ಬರುವ ಪ್ರತಿಯೊಬ್ಬರನ್ನೂ ಸಂಪೂರ್ಣ ತಪಾಸಣೆಗೆ ಒಳಪಡಿಸಬೇಕು. ಈಗಾಗಲೇ ವಿತರಿಸಿರುವ ಸಂದರ್ಶಕರ ಪಾಸ್‌ಗಳನ್ನು ಹೊರತುಪಡಿಸಿ ಹೊಸದಾಗಿ ಪಾಸ್‌ ವಿತರಿಸದಿರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತೆಲಂಗಾಣ ವಿಧಾನಸಭೆ ಅಧಿವೇಶನವು ಡಿಸೆಂಬರ್ 9ರಿಂದ ಆರಂಭವಾಗಿದ್ದು, ಹೊಸದಾಗಿ ಆಯ್ಕೆಯಾಗಿರುವ ಸದಸ್ಯರ ಪ್ರಮಾಣವಚನ ಸ್ವೀಕಾರದ ಬಳಿಕ ಇವತ್ತಿಗೆ (ಗುರುವಾರ, ಡಿಸೆಂಬರ್ 14) ಮುಂದೂಡಿಕೆಯಾಗಿತ್ತು.

ಕಾಂಗ್ರೆಸ್ ಶಾಸಕ ಗಡ್ಡಂ ಪ್ರಸಾದ್ ಕುಮಾರ್ ಅವರು ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭದ್ರತಾ ಸಿಬ್ಬಂದಿ ಅಮಾನತು
ನವದೆಹಲಿ:
ಸಂಸತ್ತಿನಲ್ಲಿ ಎದುರಾದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ ಎಂಟು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಿದೆ.

ಬುಧವಾರ ಕಲಾಪ ನಡೆಯುತ್ತಿದ್ದಾಗ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗಿದ್ದರು. ಅಷ್ಟಲ್ಲದೆ, ‘ಸ್ಮೋಕ್‌ ಕ್ಯಾನ್‌’ (ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್‌) ಹಾರಿಸಿ ದಾಂದಲೆ ಎಬ್ಬಿಸಿದ್ದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೇ ಸಮಯದಲ್ಲಿ ಸಂಸತ್‌ನ ಹೊರಗೂ ಇಬ್ಬರು ಪ್ರತಿಭಟನೆ ನಡೆಸಿದ್ದಾರೆ.

ಕೃತ್ಯದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಮೈಸೂರು ನಿವಾಸಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇನ್ನೊಬ್ಬನಿಗಾಗಿ ಶೋಧ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT