ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸ ಮಂಡನೆಗೆ ‘ಇಂಡಿಯಾ’ ಸಜ್ಜು

ಅಡಕತ್ತರಿಗೆ ಎನ್‌ಡಿಎ ಸಿಲುಕಿಸಲು ರಣತಂತ್ರ: ಸುದೀರ್ಘ ಚರ್ಚೆಗೆ ಸಿದ್ಧವೆಂದ ಕೇಂದ್ರ ಸರ್ಕಾರ
Published 25 ಜುಲೈ 2023, 16:40 IST
Last Updated 25 ಜುಲೈ 2023, 16:40 IST
ಅಕ್ಷರ ಗಾತ್ರ

ನವದೆಹಲಿ: ಮುಂಗಾರು ಅಧಿವೇಶನದ ನಾಲ್ಕನೇ ದಿನವಾದ ಮಂಗಳವಾರವೂ ಸಂಸತ್‌ನಲ್ಲಿ ಮಣಿಪುರದಲ್ಲಿನ ಹಿಂಸಾಚಾರ ಪ್ರಕರಣ ಪ್ರತಿಧ್ವನಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಹೇಳಿಕೆ ನೀಡಬೇಕೆಂಬ ವಿರೋಧ ಪಕ್ಷಗಳ ಬಿಗಿಪಟ್ಟು ಸಡಿಲಗೊಳ್ಳಲಿಲ್ಲ. ಹಾಗಾಗಿ, ಬಿಜೆಪಿ ಮತ್ತು ‘ಇಂಡಿಯಾ’ ನಡುವಿನ ಗದ್ದಲವು ಉಭಯ ಸದನಗಳ ಕಲಾಪವನ್ನು ನುಂಗಿ ಹಾಕಿತು. ಕೋಲಾಹಲ ಮುಂದುವರಿದಿದ್ದರಿಂದ ಬುಧವಾರಕ್ಕೆ ಕಲಾಪವನ್ನು ಮುಂದೂಡಲಾಯಿತು.

ಮೋದಿ ಹೇಳಿಕೆ ನೀಡಬೇಕು ಎಂಬುದು ಪ್ರತಿಪಕ್ಷಗಳ ಮುಖ್ಯ ಬೇಡಿಕೆಯಾಗಿದೆ. ಇದಕ್ಕೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹಾಗಾಗಿ, ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪಣ ತೊಟ್ಟಿರುವ ‘ಇಂಡಿಯಾ’ವು, ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ರಣತಂತ್ರ ರೂಪಿಸಿದೆ. ಬಳಿಕ ರಾಜ್ಯಸಭೆಯಲ್ಲಿಯೂ ಇದೇ ತಂತ್ರ ಹೂಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. 

ಬೆಳಿಗ್ಗೆ ನಡೆದ ‘ಇಂಡಿಯಾ’ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ತೃಣಮೂಲ ಕಾಂಗ್ರೆಸ್‌ ಹಾಗೂ ಡಿಎಂಕೆ ನಾಯಕರ ಜೊತೆ ಔಪಚಾರಿಕವಾಗಿ ಚರ್ಚಿಸಿದರು. ಉಳಿದ ಪ್ರತಿಪಕ್ಷಗಳ ಮುಂದೆಯೂ ಈ ಪ್ರಸ್ತಾವ ಮಂಡಿಸಲು ನಿರ್ಧರಿಸಿದ್ದಾರೆ.

ಕಲಾಪ ಆರಂಭಕ್ಕೂ ಮೊದಲು ಬೆಳಿಗ್ಗೆ 10ಗಂಟೆಗೆ ಈ ಕುರಿತು ಸದಸ್ಯರು ಲಿಖಿತ ಸೂಚನೆ ನೀಡಬೇಕಿದೆ. ಕನಿಷ್ಠ 50 ಸದಸ್ಯರು ಈ ಪ್ರಸ್ತಾವನೆಯನ್ನು ಅಂಗೀಕರಿಸಬೇಕಿದೆ. ಬಳಿಕ ಇದು ಸಮರ್ಪಕವಾಗಿದ್ದರೆ ಸ್ಪೀಕರ್‌ ಅವರು ಪ್ರಸ್ತಾವನೆಯ ಚರ್ಚೆಗೆ ದಿನಾಂಕ ನಿಗದಿಪಡಿಸುತ್ತಾರೆ. ಹಾಗಾಗಿ, ವಿಳಂಬ ಮಾಡದೆ ಬುಧವಾರವೇ ಈ ಪ್ರಕ್ರಿಯೆಗೆ ಚಾಲನೆ ನೀಡಲು ಪ್ರತಿಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

‘ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಪ್ರತಿಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ಈ ನಡುವೆ ತನ್ನ ಸದಸ್ಯರಿಗೆ ಕಾಂಗ್ರೆಸ್‌ ವಿಪ್‌ ಜಾರಿಗೊಳಿಸಿದೆ.

ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ ಪ್ರಸ್ತಾಪಿಸಿದ ಅವಿಶ್ವಾಸ ನಿರ್ಣಯದ ಈ ಕಾರ್ಯತಂತ್ರಕ್ಕೆ ಮೊದಲಿಗೆ ಕೆಲವು ಪಕ್ಷಗಳು ನಿರಾಸಕ್ತಿ ತೋರಿದ್ದವು. ಬಳಿಕ ಇದರ ಮಹತ್ವ ಅರ್ಥವಾದ ಬಳಿಕ ಬೆಂಬಲಕ್ಕೆ ನಿಂತಿವೆ ಎಂದು ಮೂಲಗಳು ತಿಳಿಸಿವೆ.

ಅವಿಶ್ವಾಸ ನಿರ್ಣಯ ಮಂಡನೆಯ ಫಲಿತಾಂಶದ ಬಗ್ಗೆ ‘ಇಂಡಿಯಾ’ಕ್ಕೂ ಅರಿವಿದೆ. ಆದರೆ,  ಸರ್ಕಾರವನ್ನು ಪೇಚಾಟಕ್ಕೆ ಸಿಲುಕಿಸುವುದು ಹಾಗೂ ಮೋದಿ ಅವರ ಹೇಳಿಕೆ ಪಡೆಯಲು ಇರುವ ಪರಿಣಾಮಕಾರಿಯಾದ ಮಾರ್ಗ ಇದಾಗಿದೆ ಎನ್ನುತ್ತವೆ ಮೂಲಗಳು.

‘ನಾವು ಎಲ್ಲಾ ಮಾರ್ಗಗಳನ್ನು ಅನುಸರಿಸಿದ್ದೇವೆ. ಸದ್ಯಕ್ಕೆ ನಮ್ಮ ಮುಂದಿರುವುದು ಇದೊಂದೇ ಆಯ್ಕೆ. ದೇಶದ ಜನರಿಗೆ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಲು ಇದು ಬಿಟ್ಟರೆ ಬೇರೆ ದಾರಿ ಇಲ್ಲ. ಅದಕ್ಕಾಗಿ ಈ ಹಾದಿ ತುಳಿದಿದ್ದೇವೆ. ಮೋದಿ ಸದನಕ್ಕೆ ಬಂದು ಹೇಳಿಕೆ ನೀಡುತ್ತಾರೆಂಬ ನಂಬಿಕೆಯಿದೆ’ ಎಂದು ‘ಇಂಡಿಯಾ‘ದ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಆದರೆ, ‘ಇಂಡಿಯಾ’ದ ಈ ನಿಲುವಿನಿಂದ ವೈಎಸ್‌ಆರ್‌ ಕಾಂಗ್ರೆಸ್‌, ಬಿಜೆಡಿ, ಬಿಎಸ್‌ಪಿ, ಅಕಾಲಿದಳ ಹಾಗೂ ಜೆಡಿಎಸ್‌ ಹೊರಗುಳಿದಿವೆ.

ನನಗೆ ಮಾಹಿತಿ ಇಲ್ಲ: ‘ವಿರೋಧ ಪಕ್ಷಗಳ ಈ ನಡೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಈ ಮೊದಲು ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿತ್ತು. ನಾವು ಬಹುಮತ ಹೊಂದಿದ್ದೇವೆ. ಹಾಗಾಗಿ, ಆತಂಕಪಡುವ ಅಗತ್ಯವಿಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

‘ಸ್ಪೀಕರ್‌ ನಿಗದಿಪಡಿಸುವ ದಿನದಂದು ಚರ್ಚೆಗೆ ಸರ್ಕಾರ ಸಿದ್ಧವಿದೆ. ನಾಳೆ ಸಮಯ ನೀಡಿದರೂ ತಯಾರಿದ್ದೇವೆ. ಅಮಿತ್‌ ಶಾ ಅವರು ವಿವರಣಾತ್ಮಕ ಉತ್ತರ ನೀಡಲಿದ್ದಾರೆ’ ಎಂದಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 330ಕ್ಕೂ ಹೆಚ್ಚು ಸದಸ್ಯರ ಬಲ ಹೊಂದಿದೆ. ‘ಇಂಡಿಯಾ’ಕ್ಕೆ 140 ಸದಸ್ಯರ ಬಲವಿದೆ. 60ಕ್ಕೂ ಹೆಚ್ಚು ಸದಸ್ಯರು ತಟಸ್ಥ ಪಕ್ಷಗಳಿಗೆ ಸೇರಿದ್ದಾರೆ. ವಿವಿಧ ಕಾರಣಗಳಿಂದ ಐದು ಸ್ಥಾನಗಳು ಖಾಲಿ ಇವೆ. 

ಸುಗಮ ಕಲಾಪಕ್ಕೆ ಸಹಕರಿಸಿ: ಸುಗಮ ಕಲಾಪಕ್ಕೆ ಸಹಕರಿಸುವಂತೆ ಕೋರಿ ಓಂ ಬಿರ್ಲಾ ಅವರು, ಸರ್ವಪಕ್ಷಗಳ ನಾಯಕರ ಸಭೆ ಕರೆದು ಚರ್ಚಿಸಿದರು.

ಪ್ರಮುಖ ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ ಇಲ್ಲದೆ ಅಂಗೀಕರಿಸಲು ಸರ್ಕಾರಕ್ಕೆ ಇಷ್ಟವಿಲ್ಲ. ಹಾಗಾಗಿ ವಿಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ 
ಮಣಿಪುರದಲ್ಲಿ ಸಂಘರ್ಷ ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ರಾಜ್ಯವು ಯಥಾಸ್ಥಿತಿಗೆ ಯಾವಾಗ ಮರಳುತ್ತದೆ ಎಂಬ ಬಗ್ಗೆ ಮೋದಿ ಹೇಳಿಕೆ ನೀಡಬೇಕು.
- ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಎಐಸಿಸಿ 
ಸುಗಮ ಕಲಾಪಕ್ಕೆ ಎದುರಾಗಿರುವ ಅಡ್ಡಿ ಆತಂಕ ನಿವಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ವಿಪಕ್ಷಗಳು ಪ್ರತಿದಿನವೂ ಹೊಸ ಬೇಡಿಕೆ ಮುಂಡಿಸುತ್ತಿದ್ದಾರೆ.
-ಅರ್ಜುನ್ ರಾಮ್‌ ಮೇಘವಾಲ್, ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ

ವಿಪಕ್ಷ ನಾಯಕರಿಗೆ ಶಾ ಪತ್ರ

ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಅಪೇಕ್ಷೆಯಂತೆಯೇ ಸಂಸತ್‌ನಲ್ಲಿ ಸುದೀರ್ಘ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ವಿರೋಧ ಪಕ್ಷಗಳ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪತ್ರ ಬರೆದಿದ್ದಾರೆ. ಲೋಕಸಭೆಯಲ್ಲಿ ಮಂಡನೆಯಾದ ವಿವಿಧ ರಾಜ್ಯಗಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಮಣಿಪುರ ವಿಷಯದಲ್ಲಿ ಸರ್ಕಾರ ಏನನ್ನೂ ಬಚ್ಚಿಟ್ಟಿಲ್ಲ. ನಮಗೆ ಅದರ ಭಯವೂ ಇಲ್ಲ. ನೀವು ಇಚ್ಛಿಸುವಷ್ಟು ಅವಧಿವರೆಗೂ ಚರ್ಚೆಗೆ ಸಿದ್ಧವಿದ್ದೇವೆ’ ಎಂದು ಪುನರುಚ್ಚರಿಸಿದರು.  ‘ನಿಮ್ಮ ಈ ಘೋಷಣೆಗಳು ದಲಿತರು ಮಹಿಳೆಯರು ಅಥವಾ ಸಹಕಾರ ಸಂಘಗಳ ಸದಸ್ಯರ ಅಭಿವೃದ್ಧಿಗೆ ಸಹಕಾರಿಯಾಗುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಧ್ವನಿ ಮತದ ಮೂಲಕ ಮಸೂದೆಗೆ ಅಂಗೀಕಾರ ನೀಡಲಾಯಿತು.

ನಿಯಮ 267ರ ಅಡಿ ಚರ್ಚೆಗೆ ಪಟ್ಟು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 27 ಸಂಸದರು ನಿಯಮ 267‌ರ ಅಡಿ ಚರ್ಚೆಗೆ ರಾಜ್ಯಸಭೆಯಲ್ಲಿ ಅವಕಾಶ ನೀಡುವಂತೆ ನೋಟಿಸ್‌ ಸಲ್ಲಿಸಿದ್ದಾರೆ. ಇದರನ್ವಯ ಸದನದಲ್ಲಿ ಎಲ್ಲಾ ವಿಷಯಗಳನ್ನು ಬದಿಗೊತ್ತಿ ನಿರ್ದಿಷ್ಟ ವಿಷಯ ಕುರಿತು ಚರ್ಚಿಸಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ನಿಯಮ 176ರ ಅಡಿ ಚರ್ಚೆಗೆ ಸಿದ್ಧವಿರುವುದಾಗಿ ಹೇಳಿದೆ. ಇದು ಅಲ್ಪಾವಧಿಯ ಚರ್ಚೆಗೆ ಅವಕಾಶ ಕಲ್ಪಿಸುವುದರಿಂದ ‘ಇಂಡಿಯಾ’ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಂಘರ್ಷದ ಬಗ್ಗೆ ಮೋದಿ ನಿರ್ಲಕ್ಷ್ಯವಹಿಸಿರುವುದು ಆಘಾತಕಾರಿಯಾಗಿದೆ. ಹಿಂಸಾಚಾರ ನಿಯಂತ್ರಿಸುವಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋತಿದ್ದಾರೆ. ಅವರು ಅಲ್ಲಿಗೆ ಭೇಟಿ ನೀಡಿದ ಹೊರತಾಗಿಯೂ ಶಾಂತಿ ಪುನರ್ ಸ್ಥಾಪಿಸುವ ಪ್ರಕ್ರಿಯೆಗಳು ಸಾಕಾರಗೊಂಡಿಲ್ಲ ಎಂದು ನೋಟಿಸ್‌ನಲ್ಲಿ ದೂರಲಾಗಿದೆ.

ಸಂಜಯ್‌ ಸಿಂಗ್‌ ಹೋರಾಟಕ್ಕೆ ಪವಾರ್‌ ಬೆಂಬಲ

ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಮುಂಗಾರು ಅಧಿವೇಶನ ಮುಗಿಯುವವರೆಗೂ ರಾಜ್ಯಸಭೆಯ ಕಲಾಪದಿಂದ ಅಮಾನತುಗೊಂಡಿರುವ ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರ ಹೋರಾಟಕ್ಕೆ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಬೆಂಬಲ ಘೋಷಿಸಿದ್ದಾರೆ. ಕಲಾಪದಲ್ಲಿ ಪದೇ ಪದೇ ಅನುಚಿತ ವರ್ತನೆ ತೋರಿದ್ದರಿಂದ ಸಭಾಪತಿ ಜಗದೀಪ್‌ ಧನಕರ್‌ ಅವರು ಸಿಂಗ್‌ ಅವರನ್ನು ಕಲಾಪದಿಂದ ಅಮಾನತುಗೊಳಿಸಿದ್ದಾರೆ. ಇದನ್ನು ಖಂಡಿಸಿ ಸಂಸತ್‌ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಸಿಂಗ್‌ ಧರಣಿ ನಡೆಸುತ್ತಿದ್ದಾರೆ. ಮೇಲ್ಮನೆ ಕಲಾಪವನ್ನು ಮುಂದೂಡಿದ ಬಳಿಕ ಸದನದಿಂದ ನೇರವಾಗಿ ಧರಣಿ ಸ್ಥಳಕ್ಕೆ ತೆರಳಿ ಶರದ್‌ ಅವರು ‘ಇಂಡಿಯಾ’ದಿಂದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಘೋಷಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT