ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ಇಂದು

Published 18 ಏಪ್ರಿಲ್ 2024, 15:50 IST
Last Updated 18 ಏಪ್ರಿಲ್ 2024, 15:50 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದೇಶದ 102 ಕ್ಷೇತ್ರಗಳು ಸಜ್ಜಾಗಿವೆ. ಈ ಕ್ಷೇತ್ರಗಳಲ್ಲಿ 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ. ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ.

ಈ ಕ್ಷೇತ್ರಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದವರಲ್ಲಿ ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲೆ ಕೂಡ ಇದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ನೆಚ್ಚಿಕೊಂಡಿದೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಎನ್‌ಡಿಎಗೆ ಸವಾಲು ಒಡ್ಡುವ ಪಣ ತೊಟ್ಟಿವೆ.

ಹತ್ತು ವರ್ಷಗಳ ಆಡಳಿತ, ‘ಮೋದಿಯವರ ಗ್ಯಾರಂಟಿಗಳು’ ಹಾಗೂ ‘ವಿಕಸಿತ ಭಾರತ’ದ ಹೆಸರಿನಲ್ಲಿ ಬಿಜೆಪಿಯು ಮತ ಯಾಚಿಸುತ್ತಿದೆ. ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್, ವಿವಿಧ ‘ನ್ಯಾಯ’ಗಳನ್ನು ಜಾರಿಗೆ ತರುವ ಭರವಸೆ ಕೊಟ್ಟು ಮತ ಕೇಳಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹತ್ತು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ, ಹಣದುಬ್ಬರ ನಿಯಂತ್ರಿಸಿಲ್ಲ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕೂಡ ಅದು ಆರೋಪಿಸಿದೆ.

ಏಳು ಹಂತಗಳಲ್ಲಿ ನಡೆಯಲಿರುವ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಶುಕ್ರವಾರ ನಡೆಯಲಿರುವ ಹಂತವು ಅತಿದೊಡ್ಡದು. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗಳ ಒಟ್ಟು 92 ಕ್ಷೇತ್ರಗಳಿಗೆ ಕೂಡ ಶುಕ್ರವಾರ ಮತದಾನ ನಡೆಯಲಿದೆ.

ಮತದಾನವು ಬೆಳಿಗ್ಗೆ 7 ಗಂಟೆಗೆ ಶುರುವಾಗಲಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಲು 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು ಹಾಗೂ ಸರಿಸುಮಾರು ಒಂದು ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡಿದೆ.

ಶೇಕಡ 50ಕ್ಕೂ ಹೆಚ್ಚಿನ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರಲಿದೆ. ಅಲ್ಲದೆ, ಎಲ್ಲ ಮತಗಟ್ಟೆಗಳಿಗೆ ಸೂಕ್ಷ್ಮ ಪರಿವೀಕ್ಷಕರನ್ನು ನೇಮಿಸಲಾಗುತ್ತದೆ.

ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗವು, ಮತದಾನ ಈ ಹಿಂದೆ ಕಡಿಮೆ ಆಗಿದ್ದ ಕ್ಷೇತ್ರಗಳನ್ನು ಗಮನದಲ್ಲಿ ಇರಿಸಿಕೊಂಡು ಕಾರ್ಯಕ್ರಮವನ್ನು ಕೂಡ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT