ನವದಹೆಲಿ: ಮಂಗಳವಾರ ಆಗಸ್ಟ್1 ರಂದು ಪುಣೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಲೋಕಮಾನ್ಯ ತಿಲಕ್ ರಾಷ್ಟ್ರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ಅವರು ದಗ್ದುಶೇತ್ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದು, ಬಳಿಕ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಆ.1ರಂದು ಬೆಳಿಗ್ಗೆ 11 ಗಂಟೆಗೆ ಪುಣೆಗೆ ತಲುಪಲಿರುವ ಪ್ರಧಾನಿ ಮೋದಿ ಅವರು ಮೊದಲು ದೇವರ ದರ್ಶನ ಮತ್ತು ಪೂಜೆ ನಡೆಸಲಿದ್ದಾರೆ. 11.45 ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಆ ಬಳಿಕ 12.45ಕ್ಕೆ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕರ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ‘ತಿಲಕ ಸ್ಮಾರಕ ಮಂದಿರ ಟ್ರಸ್ಟ್’ 1983ರಲ್ಲಿ ಈ ಪ್ರಶಸ್ತಿಯನ್ನು ನೀಡಲಾರಂಭಿಸಿದೆ.
ಈ ಪ್ರಶಸ್ತಿಯನ್ನು ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಿದ ಮತ್ತು ದೇಶಕ್ಕೆ ಗಮನಾರ್ಹ ಮತ್ತು ಅಸಾಧಾರಣ ಕೊಡುಗೆ ನೀಡಿದವರಿಗೆ ಪ್ರದಾನ ಮಾಡಲಾಗುತ್ತದೆ.
ಪ್ರತೀ ವರ್ಷ ಆಗಸ್ಟ್ 1 ರಂದು ಲೋಕಮಾನ್ಯ ತಿಲಕ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಬಾರಿಯ ಪ್ರಶಸ್ತಿಗೆ ಭಾಜನರಾಗಿರುವ ಪ್ರಧಾನಿ ಮೋದಿ ಅವರು ಪ್ರಶಸ್ತಿ ಪಡೆದ 41ನೇ ವ್ಯಕ್ತಿಯಾಗಲಿದ್ದಾರೆ.
ಇದುವರೆಗೆ ಡಾ. ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ. ಇಂದಿರಾ ಗಾಂಧಿ, ಮನಮೋಹನ್ ಸಿಂಗ್. ಎನ್. ಆರ್ ನಾರಾಯಣ ಮೂರ್ತಿ. ಇ. ಶ್ರೀಧರ್ ಸೇರಿ ಹಲವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.