ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಮ್ಯಾಚ್ ಫಿಕ್ಸಿಂಗ್?: ಕೇರಳದಲ್ಲಿ ಎಲ್‌ಡಿಎಫ್ ವಿರುದ್ಧ ಪ್ರಧಾನಿ ಮೋದಿ ಟೀಕೆ

Last Updated 30 ಮಾರ್ಚ್ 2021, 8:20 IST
ಅಕ್ಷರ ಗಾತ್ರ

ಪಾಲಕ್ಕಾಡ್‌: ಕೇರಳದಲ್ಲಿ 'ಮೆಟ್ರೋಮ್ಯಾನ್‌' ಇ. ಶ್ರೀಧರನ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಯುಡಿಎಫ್‌ ಮತ್ತು ಎಲ್‌ಡಿಎಫ್‌ ವಿರುದ್ಧ ಗುಡುಗಿದರು.

ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿ ಪಕ್ಷಗಳ ಕಾರ್ಯಾಚರಣೆಯನ್ನು ಟೀಕಿಸುತ್ತ, 'ಹಲವು ವರ್ಷಗಳಿಂದ ಕೇರಳ ರಾಜಕೀಯದಲ್ಲಿ ರಹಸ್ಯವಾಗಿದ್ದ ಅತ್ಯಂತ ಕೆಟ್ಟ ಸಂಗತಿ ಎಂದರೆ ಯುಡಿಎಫ್‌ ಮತ್ತು ಎಲ್‌ಡಿಎಫ್‌ನ ಸ್ನೇಹಪರ ಒಪ್ಪಂದ. ಈಗ ಮೊಟ್ಟಮೊದಲ ಬಾರಿಗೆ ಕೇರಳದ ಮತದಾರರು, ಏನಿದು ಮ್ಯಾಚ್‌–ಫಿಕ್ಸಿಂಗ್‌ (ಒಳ ಒಪ್ಪಂದ) ಎಂದು ಕೇಳುತ್ತಿದ್ದಾರೆ' ಎಂದರು.

'ಮೆಟ್ರೊಮ್ಯಾನ್‌ ಇ.ಶ್ರೀಧರನ್‌ ಕೇರಳದ ಸುಪುತ್ರ' ಎಂದ ಪ್ರಧಾನಿ ಮೋದಿ, ಅವರು ಸಮಾಜಕ್ಕಾಗಿ ಹಲವು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ ಹಾಗೂ ಅವರಿಗೆ ಅಧಿಕಾರದ ಹಪಾಹಪಿ ಇಲ್ಲ ಎಂದರು.

'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿಮ್ಮ ಆಶೀರ್ವಾದ ಕೋರಲು ಇಂದು ನಾನಿಲ್ಲಿಗೆ ಬಂದಿರುವೆ. ಪ್ರಸ್ತುತ ಕೇರಳದಲ್ಲಿರುವ ಪರಿಸ್ಥಿತಿಗಿಂತ ಭಿನ್ನವಾದ ದೂರದೃಷ್ಟಿತ್ವದೊಂದಿಗೆ ಬಂದಿದ್ದೇನೆ. ಬಿಜೆಪಿಯ ಉದ್ದೇಶವು ದೂರದೃಷ್ಟಿತ್ವ ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ. ಹಾಗಾಗಿಯೇ, ರಾಜ್ಯದಲ್ಲಿನ ಯುವಕರು, ವೃತ್ತಿಪರ ಸಮುದಾಯಗಳು ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿವೆ. ದೇಶದಾದ್ಯಂತ ಇಂಥದ್ದೇ ಟ್ರೆಂಡ್‌ ಕಾಣಬಹುದಾಗಿದೆ' ಎಂದು ಮೋದಿ ರ್‍ಯಾಲಿಯಲ್ಲಿ ಹೇಳಿದರು.

'ಈ ಕ್ಷೇತ್ರಕ್ಕಾಗಿ ನಾನು ಮಾಸ್ಟರ್ ಪ್ಲಾನ್‌ ಸಿದ್ಧಪಡಿಸಿದ್ದೇನೆ. ಅದರಲ್ಲಿ 24 ಗಂಟೆಗಳು ನೀರು ಪೂರೈಕೆ, ಘನ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಗಳಿವೆ. ಮುಂದಿನ 5 ವರ್ಷಗಳಲ್ಲಿ 25 ಲಕ್ಷ ಮರಗಳನ್ನು ನೆಡುವ ಮೂಲಕ ಹರಿಸು ಹೊದಿಕೆಯನ್ನು ಸೃಷ್ಟಿಸುವ ಗುರಿ ಇದೆ' ಎಂದು ಪಾಲಕ್ಕಾಡ್‌ನ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್‌ ಹೇಳಿದರು.

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಇ. ಶ್ರೀಧರನ್ ಸ್ಪರ್ಧೆಯಿಂದಾಗಿ ಪಾಲಕ್ಕಾಡ್‌ ಕ್ಷೇತ್ರವು ಪ್ರತಿಷ್ಠಿತ ಎನಿಸಿಕೊಂಡಿದೆ. ಮೂರನೇ ಅವಧಿಗೆ ಮರು ಆಯ್ಕೆ ಬಯಸಿರುವ ಕಾಂಗ್ರೆಸ್‌ನ ಶಫಿ ಪರಂಬಿಲ್‌ ಪ್ರಬಲ ಸ್ಪರ್ಧಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT