ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಯಮತ್ತೂರು: ಇಶಾ ಫೌಂಡೇಷನ್‌ನಲ್ಲಿ ಪೊಲೀಸರಿಂದ ವಿಚಾರಣೆ

Published : 1 ಅಕ್ಟೋಬರ್ 2024, 16:27 IST
Last Updated : 1 ಅಕ್ಟೋಬರ್ 2024, 16:27 IST
ಫಾಲೋ ಮಾಡಿ
Comments

ಚೆನ್ನೈ: ಸದ್ಗುರು ಜಗ್ಗಿ ವಾಸುದೇವ ಅವರ ‘ಇಶಾ ಫೌಂಡೇಷನ್’ ವಿರುದ್ಧ ತಮಿಳುನಾಡು ಪೊಲೀಸರು ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ಆರಂಭಿಸಿದ್ದಾರೆ. ಈ ಸಂಸ್ಥೆಯ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳ ಕುರಿತ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್‌ ಸೂಚನೆ ನೀಡಿದ ಮಾರನೆಯ ದಿನವೇ ವಿಚಾರಣೆ ಆರಂಭವಾಗಿದೆ.

ಕೊಯಮತ್ತೂರು ಗ್ರಾಮಾಂತರ ಎಸ್‌ಪಿ ಕೆ. ಕಾರ್ತಿಕೇಯನ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ತಂಡವು ಇಶಾ ಫೌಂಡೇಷನ್‌ನ ಆವರಣದಲ್ಲಿ ತನಿಖೆ ಆರಂಭಿಸಿತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರು ಕೂಡ ಈ ತಂಡದಲ್ಲಿ ಇದ್ದಾರೆ.

‘ನ್ಯಾಯಾಲಯದ ಆದೇಶ ಆಧರಿಸಿ ನಾವು ವಿಚಾರಣೆ ಶುರು ಮಾಡಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಫೌಂಡೇಷನ್‌ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿವರವನ್ನು ಪೊಲೀಸ್ ತಂಡವು ಕೇಳಿದೆ, ಆಶ್ರಮದಲ್ಲಿ ವಾಸ ಮಾಡುತ್ತಿರುವ ಹಲವರಲ್ಲಿ ಅವರ ಸ್ಥಿತಿ ಹೇಗಿದೆ ಎಂಬ ಬಗ್ಗೆ ವಿಚಾರಿಸಿದೆ.

ನಿವೃತ್ತ ಪ್ರಾಚಾರ್ಯ ಎಸ್. ಕಾಮರಾಜ್ ಅವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪೊಲೀಸರಿಗೆ ವಿಚಾರಣೆ ನಡೆಸುವಂತೆ ಸೂಚಿಸಿದೆ. ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಆಶ್ರಮದಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಕಾಮರಾಜ್ ಅವರು ದೂರಿದ್ದಾರೆ.

ಇಶಾ ಫೌಂಡೇಷನ್ ಜೊತೆ ಕೆಲಸ ಮಾಡುತ್ತಿರುವ ವೈದ್ಯರೊಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಕಳೆದ ವಾರ ದಾಖಲಾಗಿರುವ ಪ್ರಕರಣವೊಂದರ ವಿವರಗಳನ್ನು ಕೂಡ ಪೊಲೀಸರು ಕೇಳಿದ್ದಾರೆ. ‘ಆಶ್ರಮದಲ್ಲಿ ವಾಸ ಮಾಡುತ್ತಿರುವ ಎಲ್ಲರ ಬಗ್ಗೆಯೂ ನಾವು ವಿಚಾರಣೆ ನಡೆಸಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

‘ನಾವು ಕೋರ್ಟ್‌ಗೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಬೇಕಿದೆ. ತಂದೆಯೊಬ್ಬರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಒತ್ತಾಯಪೂರ್ವಕವಾಗಿ ಆಶ್ರಮವಾಸಿಗಳನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿರುವ ಬಗ್ಗೆ, ಅಲ್ಲಿ ಕೆಲಸ ಮಾಡುತ್ತಿರುವ ವೈದ್ಯರೊಬ್ಬರು ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಯಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ಆದರೆ ಶೋಧ ಕಾರ್ಯವನ್ನು ಅವರು ನಡೆಸಿಲ್ಲ ಎಂದು ಇಶಾ ಫೌಂಡೇಷನ್ ವಕ್ತಾರರೊಬ್ಬರು ತಿಳಿಸಿದ್ದಾರೆ. ‘ಅವರು ಇಲ್ಲಿನ ನಿವಾಸಿಗಳನ್ನು, ಸ್ವಯಂಸೇವಕರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ. ಅವರ ಜೀವನಶೈಲಿ, ಅವರು ಇಲ್ಲಿಗೆ ಬಂದು, ವಾಸಿಸಲು ಆರಂಭಿಸಿದ್ದು ಹೇಗೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಇಶಾ ಯೋಗ ಕೇಂದ್ರದಲ್ಲಿ ತಾವು ಸ್ವಇಚ್ಛೆಯಿಂದ ವಾಸಿಸುತ್ತಿರುವುದಾಗಿ ಇಬ್ಬರು ಹೆಣ್ಣುಮಕ್ಕಳು ಹೇಳಿದ್ದಾರೆ. ಈಗ ಈ ವಿಚಾರವು ಕೋರ್ಟ್‌ ಮುಂದಿರುವ ಕಾರಣ, ಸತ್ಯ ಹೊರಬರುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT