ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kerala Bomb Blast: ಹೊಣೆ ಹೊತ್ತ ಮಾರ್ಟಿನ್ ಬಂಧನ

Published 30 ಅಕ್ಟೋಬರ್ 2023, 16:02 IST
Last Updated 30 ಅಕ್ಟೋಬರ್ 2023, 16:02 IST
ಅಕ್ಷರ ಗಾತ್ರ

ಕೊಚ್ಚಿ: ಕ್ರೈಸ್ತರ ಧಾರ್ಮಿಕ ಸಭೆಯಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆ ಹೊತ್ತಿರುವ ಡೊಮಿನಿಕ್ ಮಾರ್ಟಿನ್ ಅವರನ್ನು ಬಂಧಿಸಲಾಗಿದೆ ಎಂದು ಕೇರಳ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಸ್ಫೋಟದಲ್ಲಿ ಗಾಯಗೊಂಡಿದ್ದ 12 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಇದರಿಂದಾಗಿ ಮೃತಪಟ್ಟವರ ಸಂಖ್ಯೆಯು ಮೂರಕ್ಕೆ ಏರಿಕೆಯಾಗಿದೆ.

ಕ್ರೈಸ್ತರ ಧಾರ್ಮಿಕ ಪಂಥವಾದ ‘ಯಹೋವನ ಸಾಕ್ಷಿಗಳು’ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾನುವಾರ ಸರಣಿ ಬಾಂಬ್‌ ಸ್ಫೋಟಿಸಲಾಗಿತ್ತು. ಸ್ಫೋಟ ನಡೆದ ಕೆಲವು ತಾಸುಗಳ ನಂತರದಲ್ಲಿ ಮಾರ್ಟಿನ್ ಅವರು, ಸ್ಫೋಟಕ್ಕೆ ಹೊಣೆ ಹೊತ್ತುಕೊಂಡು ಪೊಲೀಸರಿಗೆ ಶರಣಾಗಿದ್ದರು.

ಶರಣಾಗುವ ಮೊದಲು ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೊ ಒಂದನ್ನು ಪ್ರಸಾರ ಮಾಡಿದ್ದ ಮಾರ್ಟಿನ್, ಬಾಂಬ್ ಸ್ಫೋಟಿಸಿದ್ದಕ್ಕೆ ಕಾರಣ ತಿಳಿಸಿದ್ದರು. 

ಈ ಸ್ಫೋಟ ಕುರಿತ ತನಿಖೆಯು ಸಮರ್ಥವಾಗಿ ಮುನ್ನಡೆಯುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ. ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿದ ಅವರು, ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದರು.

ನಡ್ಡಾ ಟೀಕೆ:  

ಕೇರಳದ ಎಡರಂಗ ಸರ್ಕಾರದ ಬಗ್ಗೆ ಕಟುಟೀಕೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಈ ಸರ್ಕಾರವು ರಾಜ್ಯದಲ್ಲಿನ ‘ತೀವ್ರವಾದ’ವನ್ನು ಉಪೇಕ್ಷಿಸಿದೆ ಎಂದು ದೂರಿದ್ದಾರೆ.

ಇಸ್ಲಾಮಿಕ್ ತೀವ್ರವಾದಿ ಸಂಘಟನೆ ಹಮಾಸ್‌ನ ನಾಯಕರೊಬ್ಬರು ಕೇರಳದಲ್ಲಿ ಕೆಲವು ದಿನಗಳ ಹಿಂದೆ ನಡೆದ ಸಭೆಯನ್ನು ಉದ್ದೇಶಿಸಿ ವರ್ಚುವಲ್ ವೇದಿಕೆಯ ಮೂಲಕ ಮಾತನಾಡಿದ್ದರು. ಈ ವಿಚಾರವಾಗಿ ಎಡರಂಗ ಸರ್ಕಾರವು ಮೂಕ ಪ್ರೇಕ್ಷಕನಾಗಿತ್ತು ಎಂದು ಕೂಡ ನಡ್ಡಾ ಅವರು ಆರೋಪಿಸಿದ್ದಾರೆ.

ಎಡರಂಗ ಸರ್ಕಾರವು ದುರಾಡಳಿತದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಕಾರ್ಯಕರ್ತರು ಕೇರಳ ಸಚಿವಾಲಯದ ಪ್ರವೇಶದ್ವಾರಗಳಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ನಡ್ಡಾ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಹಮಾಸ್ ವಿರುದ್ಧ ಇಸ್ರೇಲ್ ಸಾರಿರುವ ಯುದ್ಧವನ್ನು ವಿರೋಧಿಸಿ ಕೇರಳದ ಇಸ್ಲಾಮಿಕ್ ಸಂಘಟನೆಯೊಂದು ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿತ್ತು. ಹಮಾಸ್ ನಾಯಕ ಖಾಲೆದ್ ಮಶಾಲ್ ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಪಾಲ್ಗೊಂಡು ಮಾತನಾಡಿದ್ದನ್ನು ಉಲ್ಲೇಖಿಸಿ ನಡ್ಡಾ ಅವರು, ‘ಮಶಾಲ್ ತನ್ನ ಸಂಘಟನೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾನೆ’ ಎಂದು ದೂರಿದ್ದಾರೆ.

‘ಇದರ ಅರ್ಥ ಏನು? ದೇವರ ಸ್ವಂತ ನಾಡು ಕೇರಳಕ್ಕೆ ನೀವು ಕೆಟ್ಟ ಹೆಸರು ತರುತ್ತಿದ್ದೀರಿ’ ಎಂದು ಹೇಳಿದ ನಡ್ಡಾ ಅವರು, ಹೀಗೆ ಮಾಡುವುದಕ್ಕೆ ಅವಕಾಶ ಕೊಡಬಹುದೇ ಎಂದು ಅಲ್ಲಿ ಸೇರಿದ್ದವರನ್ನು ಪ್ರಶ್ನಿಸಿದ್ದಾರೆ. ಭಾನುವಾರ ಕೊಚ್ಚಿಯಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಉಲ್ಲೇಖಿಸಿ ನಡ್ಡಾ ಅವರು, ‘ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ತೀವ್ರವಾದವನ್ನು ಉಪೇಕ್ಷಿಸಿದ ಕಾರಣಕ್ಕೆ ಶಾಂತಿಯುತ ರಾಜ್ಯದಲ್ಲಿ ಇಂತಹ ಘಟನೆ ನಡೆದಿದೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT