ಮುಂಬೈ: ನಿರಶನ ಕೈಗೊಂಡಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಜಲ್ನಾ ಜಿಲ್ಲೆಯ ಅಂತರ್ವಾಲಿ ಸಾರಥಿ ಗ್ರಾಮದಲ್ಲಿ ನಾಲ್ಕನೇ ಬಾರಿಗೆ ಉಪವಾಸ ಸತ್ಯಾಗ್ರಹವನ್ನು ಜರಾಂಗೆ ಅವರು ಫೆ.10ರಿಂದ ಆರಂಭಿಸಿದ್ದಾರೆ.
‘ಜರಾಂಗೆ ಅವರು ತೀರಾ ಬಳಲಿದ್ದಾರೆ. ಅವರಿಗೆ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ನಿರ್ಜಲೀಕರಣದಿಂದಾಗಿ ಅವರ ಮೂಗಿನಿಂದ ರಕ್ತ ಸೋರುತ್ತಿದೆ. ಕಳೆದ ಎರಡು ದಿನಗಳಿಂದ ಅವರು ನೀರು ಕುಡಿಯುವುದನ್ನೂ ಬಿಟ್ಟಿದ್ದಾರೆ’ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ. ಬಹಳ ಒತ್ತಾಯಪಡಿಸಿದ ಬಳಿಕ ಲವಣಯುಕ್ತ ದ್ರಾವಣವನ್ನು ಅವರು ಕುಡಿದರು ಎಂದು ಬೆಂಬಲಿಗರು ಹೇಳಿದರು.
ಅವರು ನಿರಶನ ಕೈಗೊಂಡಿರುವ ಸ್ಥಳದ ಬಳಿ ಜನರು ರೋದಿಸುವ, ಜರಾಂಗೆ ಆರೋಗ್ಯಕ್ಕಾಗಿ ಪ್ರಾರ್ಥಿಸುವ ದೃಶ್ಯಗಳು ಕಂಡುಬಂದಿವೆ.
ಬಳಿಕ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸರ್ಕಾರವು ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಅದರ ಪರಿಣಾಮವನ್ನು ಸರ್ಕಾರ ಎದುರಿಸಲಿದೆ’ ಎಂದು ಬರೆದಿದ್ದಾರೆ.
‘ನನ್ನ ಪತಿಗೆ ಏನಾದರೂ ಕೆಡುಕಾದರೆ, ಅದಕ್ಕೆ ಸರ್ಕಾರವೇ ಹೊಣೆ’ ಎಂದು ಜರಾಂಗೆ ಅವರ ಪತ್ನಿ ಸೌಮಿತ್ರಾ ಜರಾಂಗೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ರಾಣೆ ಕಿಡಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರಕ್ಕೆ ಬರುವುದನ್ನು ತಡೆಯುವುದಾಗಿ ಜರಾಂಗೆ ಅವರು ಹೇಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರು, ‘ಜರಾಂಗೆ ಅವರನ್ನು ನಾನು ಮರಾಠ ನಾಯಕ ಎಂದು ಪರಿಗಣಿಸುವುದಿಲ್ಲ. ಮೋದಿ ಅವರಿಗೆ ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಅವರು ತಮ್ಮ ಮಿತಿ ಮೀರಿದ್ದಾರೆ. ಅವರಿಗೆ ಮರಾಠರ ನಿಜವಾದ ಶಕ್ತಿಯನ್ನು ತೋರಿಸುತ್ತೇವೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾವಿಕಾಸ ಆಘಾಡಿ, ಜರಾಂಗೆ ಅವರು ಪ್ರಸ್ತಾಪಿಸಿರುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದೆ.