ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು | ಸಚಿವರಾಗಿ ಪೊನ್ಮುಡಿ ಪ್ರಮಾಣ

‘ಸುಪ್ರೀಂ’ ಆದೇಶದ ಬೆನ್ನಲ್ಲೇ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ರವಿ
Published 22 ಮಾರ್ಚ್ 2024, 13:40 IST
Last Updated 22 ಮಾರ್ಚ್ 2024, 13:40 IST
ಅಕ್ಷರ ಗಾತ್ರ

ಚೆನ್ನೈ: ಡಿಎಂಕೆ ಹಿರಿಯ ನಾಯಕ ಕೆ. ಪೊನ್ಮುಡಿ ಅವರು ತಮಿಳುನಾಡಿನ ಸಚಿವರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್‌.ಎನ್‌.ರವಿ ಅವರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವನ್ನು ಬೋಧಿಸಿದರು. ಈ ಸಂಬಂಧ ಸುಪ್ರೀಂ ಕೋರ್ಟ್‌ ರಾಜ್ಯಪಾಲರಿಗೆ ಛೀಮಾರಿ ಹಾಕಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 2023ರ ಡಿಸೆಂಬರ್‌ 19ರಂದು ಮದ್ರಾಸ್‌ ಹೈಕೋರ್ಟ್‌ನಿಂದ ಶಿಕ್ಷೆಗೊಳಗಾದ ಬಳಿಕ ಪೊನ್ಮುಡಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು. ಅದಾದ ಮೂರು ತಿಂಗಳ ಬಳಿಕ ಅವರು ಮತ್ತೊಮ್ಮೆ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಸಚಿವರಾದ ಉದಯನಿಧಿ ಸ್ಟಾಲಿನ್‌, ಮಾ ಸುಬ್ರಮಣಿಯನ್‌ ಸೇರಿದಂತೆ ಕೆಲ ಸಚಿವರು ಪಾಲ್ಗೊಂಡಿದ್ದರು. 

ಪೊನ್ಮುಡಿ ಅವರಿಗೆ ಈ ಹಿಂದೆ ನೀಡಲಾಗಿದ್ದ ಉನ್ನತ ಶಿಕ್ಷಣ ಖಾತೆಯನ್ನೇ ಹಂಚಿಕೆ ಮಾಡಲಾಗಿದೆ. ಅಲ್ಪಾವಧಿಯಲ್ಲಿ ಈ ಖಾತೆಯ ಹೊಣೆಯನ್ನು ಹಿಂದುಳಿದ ವರ್ಗಗಳ ಸಚಿವ ಆರ್‌.ಎಸ್‌.ರಾಜಕಣ್ಣಪ್ಪನ್‌ ಅವರಿಗೆ ವಹಿಸಲಾಗಿತ್ತು.

ಪೊನ್ಮುಡಿ ಅವರನ್ನು ಸಚಿವರಾಗಿ ನೇಮಿಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ರಾಜ್ಯಪಾಲ ಆರ್‌.ಎನ್‌.ರವಿ ಅವರಿಗೆ ಮಾರ್ಚ್‌ 13ರಂದು ಶಿಫಾರಸು ಮಾಡಿದ್ದರು. ಅದನ್ನು ನಿರಾಕರಿಸಿದ್ದ ರಾಜ್ಯಪಾಲರು, ಪೊನ್ಮುಡಿ ಅವರ ಶಿಕ್ಷೆ ಅಮಾನತು ಆಗಿದ್ದು, ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಕಾರಣ ಸಚಿವರಾಗಿ ನಿಯುಕ್ತಿಗೊಳಿಸಲು ಸಾಧ್ಯವಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. 

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಪೊನ್ಮುಡಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ಬಳಿಕವೂ ರಾಜ್ಯಪಾಲರು ಅವರನ್ನು ಸಚಿವರನ್ನಾಗಿ ನೇಮಿಸಲು ನಿರಾಕರಿಸಿರುವುದು ಸರಿಯಲ್ಲ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ 24 ಗಂಟೆಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ರಾಜ್ಯಪಾಲ ರವಿ ಅವರಿಗೆ ಸೂಚಿಸಿತ್ತು. 

‘ಈ ಮಾತನ್ನು ನಾವು ನ್ಯಾಯಾಲಯದಲ್ಲಿ ಗಟ್ಟಿಯಾಗಿ ಹೇಳಲು ಬಯಸಿರಲಿಲ್ಲ, ಆದರೆ ರಾಜ್ಯಪಾಲರು ಸುಪ್ರೀಂ ಕೋರ್ಟ್‌ನ ಮಾತನ್ನು ಧಿಕ್ಕರಿಸುತ್ತಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡಿದವರು ಆ ಕೆಲಸವನ್ನು ಸರಿಯಾಗಿ ಮಾಡಿಲ್ಲ. ವ್ಯಕ್ತಿಯೊಬ್ಬ ಅಪರಾಧಿ ಎಂದು ನೀಡಲಾದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ ಎಂದಾದರೆ, ಸುಪ್ರೀಂ ಕೋರ್ಟ್‌ ಕೊಟ್ಟ ತಡೆಯು ಜಾರಿಗೆ ಬಂದಿದೆ ಎಂದೇ ಅರ್ಥ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಉದ್ದೇಶಿಸಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT