ನವದೆಹಲಿ: ‘ಕೇಂದ್ರ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದವರನ್ನು ವಂಚಿಸುತ್ತಿದೆ. ನಿಯಂತ್ರಣಕ್ಕೆ ಬಾರದ ನಿರುದ್ಯೋಗ ಮತ್ತು ನಿಯಂತ್ರಣ ಮೀರಿದ ಹಣದುಬ್ಬರದಂಥ ಸಮಸ್ಯೆಗಳಿಗೆ ಕಾಂಗ್ರೆಸ್ ಹೆಚ್ಚಿನ ಮಹತ್ವ ನೀಡುತ್ತದೆ. ಈ ಸಮಸ್ಯೆಗಳ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ರೂಪಿಸಲಿದ್ದೇವೆ’ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಹೇಳಿದರು.
ಚುನಾವಣೆ ದೃಷ್ಟಿಯಿಂದ ಪಕ್ಷದ ಸಂಘಟನೆ, ದೇಶಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಸಭೆ ನಡೆಸಿತು. ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕಗಳ ಮುಖ್ಯಸ್ಥರು ಮತ್ತು ಎಐಸಿಸಿ ರಾಜ್ಯ ಉಸ್ತುವಾರಿಗಳು ಪಾಲ್ಗೊಂಡಿದ್ದ ಈ ಸಭೆಯ ನೇತೃತ್ವವನ್ನು ಖರ್ಗೆ ವಹಿಸಿದ್ದರು.
We convened a meeting of AICC General Secretaries, In-charges and Pradesh Congress Committee Presidents to discuss Organisational matters and various issues of national importance for election preparedness.
— Mallikarjun Kharge (@kharge) August 13, 2024
1⃣The shocking revelations of nexus between SEBI and Adani needs to a… pic.twitter.com/jNOmGRI22V
ಇದೇವೇಳೆ, ಸೆಬಿ ಮತ್ತು ಅದಾನಿ ನಡುವಿನ ಸಂಬಂಧದ ಕುರಿತೂ ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ‘ಸಣ್ಣ ಮಟ್ಟದ ಹೂಡಿಕೆದಾರರ ಹಣಕ್ಕೆ ಹಾನಿ ಮಾಡುವಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೂಡಲೇ ಸೆಬಿ ಮುಖ್ಯಸ್ಥರ ರಾಜೀನಾಮೆ ಪಡೆಯಬೇಕು. ಈ ನಿಟ್ಟಿನಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಬೇಕು’ ಎಂದು ಹೇಳಿದರು.
‘ಎನ್‌ಡಿಎ ಸರ್ಕಾರವು ಸಂವಿಧಾನದ ಮೇಲೆ ದಾಳಿ ನಡೆಸುವುದನ್ನು ಈಗಲೂ ಮುಂದುವರಿಸಿದೆ. ಜನಗಣತಿ ನಡೆಸಬೇಕು ಎಂಬುದು ಜನರ ಆಗ್ರಹವಾಗಿದೆ’ ಎಂದರು.
ಜೊತೆಗೆ, ‘ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸುವ ನಿಟ್ಟಿನಲ್ಲಿ ಮತ್ತು ಅಗ್ನಿಪಥ ಯೋಜನೆಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.