ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಕಾ ಚಂಡಮಾರುತ | ಜನವಸತಿ ಪ್ರದೇಶಗಳಿಗೆ ನುಗ್ಗಿದ ಉಪ್ಪು ನೀರು

Published 15 ಮೇ 2023, 12:25 IST
Last Updated 15 ಮೇ 2023, 12:25 IST
ಅಕ್ಷರ ಗಾತ್ರ

ಢಾಕಾ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ‘ಮೋಕಾ’ ಚಂಡಮಾರುತ ಮ್ಯಾನ್ಮಾರ್‌ನ ಪಶ್ಚಿಮ ಭಾಗದ ಕರಾವಳಿ ಪ್ರದೇಶವನ್ನು ಅಪ್ಪಳಿಸಿದ್ದು, ಜನವಸತಿ ಪ್ರದೇಶಕ್ಕೆ ಅಪಾರ ಪ್ರಮಾಣದಲ್ಲಿ ನುಗ್ಗಿರುವ ಸಮುದ್ರ ನೀರಿನಲ್ಲಿ ಸಾವಿರಾರು ಮಂದಿ ಸಿಲುಕಿದ್ದಾರೆ. 

ಚಂಡಮಾರುತದಿಂದ ಸಂಭವಿಸಿದ ಹಲವು ಅನಾಹುತಗಳಿಗೆ ಸಿಲುಕಿ ಆರು ಮಂದಿ ಮೃತಪಟ್ಟಿದ್ದು, 700 ಮಂದಿ ಗಾಯಗೊಂಡಿದ್ದಾರೆ. 20 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಮಂದಿ ಶಾಲೆ, ಪಗೋಡಾಗ, ಬೌದ್ಧ ಧರ್ಮಛತ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮ್ಯಾನ್ಮಾರ್‌ನ ರಖಿನ್‌ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಅಬ್ಬರ ಕೊಂಚ ತಗ್ಗಿದ್ದರೂ, ಜನರು ಈಗಲೂ ಸಮುದ್ರದಿಂದ ನುಗ್ಗಿಬಂದ ನೀರಿನಲ್ಲಿ ಸಿಲುಕಿದ್ದಾರೆ. ಕೆಲವೆಡೆ ಆಳೆತ್ತರಕ್ಕೆ ಉಪ್ಪುನೀರು ನಿಲುಗಡೆಯಾಗಿದೆ. ಕೆಲವೆಡೆ 3.5 ಮೀಟರ್‌ನಷ್ಟು ಎತ್ತರಕ್ಕೂ ಸಮುದ್ರದ ನೀರು ನಿಂತಿದೆ.

ಭಾನುವಾರ ಸಂಜೆ ಸಿಟ್ವಿ ಉಪನಗರದ ಮೇಲೆ ಮೊದಲಿಗೆ ಚಂಡಮಾರುತ ಅಪ್ಪಳಿಸಿತು. ಗಾಳಿಯ ವೇಗ ಗಂಟೆಗೆ 209 ಕಿ.ಮೀ.ನಷ್ಟಿತ್ತು. ರಖಿನ್‌ ರಾಜ್ಯದ 17 ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗೆ ಹಾನಿಯಾಗಿದೆ.

ಪ್ರಬಲ ಗಾಳಿಯಿಂದಾಗಿ ಮೊಬೈಲ್‌ ಫೋನ್‌ ಟವರ್‌ಗಳು ನೆಲಕ್ಕುರುಳಿದ್ದು, ಸಂಪರ್ಕ ಕಡಿತವಾಗಿದೆ. ಹೀಗಾಗಿ ಹಾನಿಯನ್ನು ಫೊಟೊ, ವಿಡಿಯೊ ಮೂಲಕ ಸೆರೆಹಿಡಿಯುವ ಪ್ರಯತ್ನಕ್ಕೂ ಅಡ್ಡಿ ಉಂಟಾಗಿದೆ. 

ಮ್ಯಾನ್ಮಾರ್‌ನ ದೊಡ್ಡ ನಗರ ಯಾಂಗಾನ್‌ ನೈರುತ್ಯ ಭಾಗದಲ್ಲಿ 425 ಕಿ.ಮೀ.ದೂರದಲ್ಲಿರುವ ಸಿಟ್ವಿ, ಕ್ಯಾಕ್‌ಪ್ಯು, ಜಿವಾ ಉಪನಗರಗಳಲ್ಲಿ ಭಾರಿ ಹಾನಿ ಸಂಭವಿಸಿದೆ.

2008ರ ಮೇ ತಿಂಗಳಲ್ಲಿ ಮ್ಯಾನ್ಮಾರ್‌ಗೆ ಅಪ್ಪಳಿಸಿದ್ದ ‘ನರ್ಗಿಸ್‌’ ಚಂಡಮಾರುತದಿಂದ 1.38 ಲಕ್ಷ ಜನರು ಮೃತಪಟ್ಟಿದ್ದರು ಹಾಗೂ ಸಾವಿರಾರು ಮನೆಗಳು, ಕಟ್ಟಡಗಳು ನಾಮಾವಶೇಷಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT