ನವದೆಹಲಿ: ‘ಪ್ರಸಾದ ವಿತರಿಸುವ ಎಲ್ಲಾ ಕೇಂದ್ರಗಳಲ್ಲೂ ಗುಣಮಟ್ಟ ಖಾತ್ರಿಗಾಗಿ ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪ್ರಯೋಗಾಲಯಗಳನ್ನು ತೆರೆಯಬೇಕು’ ಎಂದು ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಒತ್ತಾಯಿಸಿದ್ದಾರೆ.
ತಿರುಪತಿ ಲಾಡು ವಿಷಯದಲ್ಲಿ ಎದ್ದಿರುವ ವಿವಾದ ಕುರಿತು ಶನಿವಾರ ಮಾತನಾಡಿರುವ ಅವರು, ‘ಸಾರ್ವಜನಿಕರಿಗೆ ನಿತ್ಯ ಪ್ರಸಾದ ವಿತರಿಸುವ ಕೇಂದ್ರ ನಡೆಸುವ ಸಂಸ್ಥೆಗಳಿಂದ ಸಂಗ್ರಹವಾಗುವ ಹಣದಿಂದಲೇ ಪ್ರಯೋಗಾಲಯ ನಿರ್ವಹಣೆ ಸಾಧ್ಯವಿದೆ’ ಎಂದಿದ್ದಾರೆ.
‘ಇಂಥ ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗದಂತೆ ತಡೆಯುವ ಉದ್ದೇಶದಿಂದ, ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಎಫ್‌ಎಸ್‌ಎಸ್‌ಎಐನ ಆಹಾರ ಸುರಕ್ಷತೆ ಪರೀಕ್ಷಾ ಕೇಂದ್ರಗಳನ್ನು ತೆರೆಯುವುದರಿಂದ ಜನರಿಗೆ ಗುಣಮಟ್ಟದ ಆಹಾರ ವಿತರಣೆ ಸಾಧ್ಯವಾಗಲಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
To address issues arising out of #TirupatiPrasadam we must ensure at all public places where #Prasadam #food is distributed @fssaiindia set up food testing labs to ensure food distribution is in line with expectations of general public/ devotees,conforms to desired…
— Suresh Prabhu (@sureshpprabhu) September 21, 2024
‘ಆಹಾರ ಅಥವಾ ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿ, ಅದರ ವರದಿಯನ್ನು ಪರದೆ ಮೇಲೆ ಆಗಾಗ ಮೂಡಿಸುತ್ತಿದ್ದರೆ ಸಾರ್ವಜನಿಕರಿಗೂ ಸೇವಿಸುವ ಆಹಾರದ ಕುರಿತು ಖಾತ್ರಿ ಮೂಡಲಿದೆ’ ಎಂದು ಸಲಹೆ ನೀಡಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ತಿರುಪತಿ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಚರ್ಬಿಯನ್ನು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆರೋಪ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.
ಇದಕ್ಕೆ ತಿರುಗೇಟು ನೀಡಿದ್ದ ವೈಎಸ್‌ಆರ್‌ಸಿಪಿ, ‘ರಾಜಕೀಯ ದುರುದ್ದೇಶದಿಂದ ಹೀನ ಬಗೆಯ ಆರೋಪಗಳನ್ನು ಮಾಡಲಾಗಿದೆ. ತನ್ನ ಆರೋಪಗಳಿಗೆ ಸರಿಹೊಂದುವ ಪ್ರಯೋಗಾಲಯದ ವರದಿಯನ್ನು ಎಲ್ಲೆಡೆ ಹರಿಯಬಿಡಲಾಗುತ್ತಿದೆ’ ಎಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.