ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುಪತಿ ಲಾಡು: ದನ, ಹಂದಿ ಕೊಬ್ಬು; ಪ್ರಯೋಗಾಲಯ ವರದಿ ಎಂದ TDP; ಖಾತ್ರಿಪಡಿಸದ TTD

Published : 19 ಸೆಪ್ಟೆಂಬರ್ 2024, 14:54 IST
Last Updated : 19 ಸೆಪ್ಟೆಂಬರ್ 2024, 14:54 IST
ಫಾಲೋ ಮಾಡಿ
Comments

ಅಮರಾವತಿ: ವಿಶ್ವಪ್ರಸಿದ್ಧ ತಿರುಪತಿ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂಬ ಗುಜರಾತ್‌ ಮೂಲದ ಜಾನುವಾರು ಹಾಗೂ ಆಹಾರ ಕುರಿತ ಪ್ರಯೋಗಾಲಯದ ವರದಿಯನ್ನು ತೆಲುಗು ದೇಶಂ ಪಕ್ಷ (ಟಿಡಿಪಿ) ಗುರುವಾರ ಪ್ರದರ್ಶಿಸುವ ಮೂಲಕ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಪಕ್ಷದ ವಕ್ತಾರ ಅನಂ ವೆಂಕಟರಮಣ ರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡು, ‘ಲಾಡುವಿನ ತಯಾರಿಕೆಯಲ್ಲಿ ಬಳಕೆಯಾದ ತುಪ್ಪದ ಮಾದರಿಯಲ್ಲಿ ದನ ಹಾಗೂ ಹಂದಿಯ ಕೊಬ್ಬು, ಮೀನಿನ ಎಣ್ಣೆಯ ಮಾದರಿಗಳು ಪತ್ತೆಯಾಗಿವೆ. ಈ ಮಾದರಿಯನ್ನು 2024ರ ಜುಲೈ 9ರಂದು ಸಂಗ್ರಹಿಸಲಾಗಿದೆ. ಜುಲೈ 16ರಂದು ಪ್ರಯೋಗಾಲಯ ತನ್ನ ವರದಿ ನೀಡಿದೆ‘ ಎಂದು ತಿಳಿಸಿದ್ದಾರೆ.

ಪ್ರಯೋಗಾಲಯದ ವರದಿಯನ್ನು ಆಂಧ್ರಪ್ರದೇಶ ಸರ್ಕಾರವಾಗಲೀ ಅಥವಾ ವೆಂಕಟೇಶ್ವರ ಸ್ವಾಮಿ ದೇಗುಲ ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಖಾತ್ರಿಪಡಿಸಿಲ್ಲ. 

ಗುಜರಾತ್‌ನ ಆನಂದ್‌ನಲ್ಲಿರುವ ಜಾನುವಾರು ಹಾಗೂ ಆಹಾರ ಕುರಿತ ವಿಶ್ಲೇಷಣೆ ಮತ್ತು ಕಲಿಕಾ ಕೇಂದ್ರದ ಪ್ರಯೋಗಾಲಯವು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಬಹುಶಿಸ್ತೀಯ ವಿಶ್ಲೇಷಣಾತ್ಮಕ ಪ್ರಯೋಗಾಲಯದ ಭಾಗವಾಗಿದೆ.

ವೆಂಕಟೇಶ್ವರ ದೇವಸ್ಥಾನದ ಪವಿತ್ರ ಪ್ರಸಾದವಾದ ತಿರುಪತಿ ಲಾಡು ತಯಾರಿಕೆಯಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಬುಧವಾರ ಆರೋಪಿಸಿದ್ದರು. ಆದರೆ ಈ ಆರೋಪವನ್ನು ವೈಎಸ್‌ಆರ್‌ಸಿಪಿ ಕಾಂಗ್ರೆಸ್ ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT