ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
EXPLAINER: ತಿರುಪತಿ ಲಡ್ಡು ವಿವಾದ: ತುಪ್ಪ ಎಲ್ಲಿಯದು? ನಾಯಕರು ಹೇಳಿದ್ದೇನು?
EXPLAINER: ತಿರುಪತಿ ಲಡ್ಡು ವಿವಾದ: ತುಪ್ಪ ಎಲ್ಲಿಯದು? ನಾಯಕರು ಹೇಳಿದ್ದೇನು?
ಫಾಲೋ ಮಾಡಿ
Published 20 ಸೆಪ್ಟೆಂಬರ್ 2024, 14:14 IST
Last Updated 20 ಸೆಪ್ಟೆಂಬರ್ 2024, 14:14 IST
Comments

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಮ್ಸ್‌ನ ಬಾಲಾಜಿ ದೇಗುಲಕ್ಕೆ ಭೇಟಿ ನೀಡಿದವರಿಗೆ ನೀಡಲಾಗುವ ಲಡ್ಡು ಪ್ರಸಾದ ಈಗ ವಿವಾದ ಸ್ವರೂಪ ಪಡೆದಿದೆ. ಲಡ್ಡುವಿನಲ್ಲಿ ಗೋವು, ಹಂದಿಯ ಚರ್ಬಿ, ಮೀನಿನ ಎಣ್ಣೆ ಬೆರೆಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿಕೆ, ಗುಜರಾತ್‌ನ ಪ್ರಯೋಗಾಲಯದ ವರದಿಯು ಈಗ ರಾಜಕೀಯ ಜಟಾಪಟಿಯ ಜತೆಗೆ, ಜನರಲ್ಲೂ ಆತಂಕ ಮೂಡಿಸಿದೆ.

ಆಂಧ್ರಪ್ರದೇಶದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಮುಖ್ಯಸ್ಥ ವೈ.ಎಸ್. ಜಗನ್‌ಮೋಹನ್‌ ರೆಡ್ಡಿ ವಿರುದ್ಧ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದೇವಸ್ಥಾನವನ್ನು ಅಪವಿತ್ರಗೊಳಿಸಿದ ಆರೋಪ ಮಾಡಿದ್ದಾರೆ. ಇದು ತಿರುಪತಿ ಬಾಲಾಜಿಯ ಕೊಟ್ಯಂತರ ಭಕ್ತರಲ್ಲಿ ಆತಂಕ ಮೂಡಿಸಿದೆ. 

ಘಟನೆ ನಂತರ ದೇವಸ್ಥಾನವನ್ನು ಶುದ್ಧೀಕರಿಸಲಾಗುವುದು ಎಂದಿರುವ ಮುಖ್ಯಮಂತ್ರಿ ನಾಯ್ಡು, ‘ತುಪ್ಪ ಖರೀದಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿರುವ ಪರಿಣಾಮ, ಕಳಪೆ ಗುಣಮಟ್ಟದ ಹಾಗೂ ಕಲಬೆರಕೆಯಾದ ತುಪ್ಪವನ್ನು ಪೂರೈಕೆ ಮಾಡಲಾಗಿದೆ. ಪ್ರತಿ ದಿನ ಸುಮಾರು 3 ಲಕ್ಷ ಲಾಡು ಬೇಡಿಕೆ ಇರುವ ಪ್ರಸಿದ್ಧ ಹಾಗೂ ಪವಿತ್ರ ತಿರುಪತಿ ಲಾಡುವಿಗೆ ಕಲಬೆರಕೆ ಮಾಡುವ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲಾಗಿದೆ’ ಎಂದು ಆರೋಪಿಸಿದ್ದರು.

ಈ ಕುರಿತಂತೆ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಅವರು ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಿರುಪತಿಯಲ್ಲಿ ‘ಲಡ್ಡು’ ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಿದ್ದರು’ ಎಂದಿದ್ದಾರೆ.

‘ನಮ್ಮಲ್ಲಿ ಕಲಬೆರಕೆ ಪತ್ತೆಗೆ ಪರೀಕ್ಷಾ ಸೌಲಭ್ಯಗಳ ಕೊರತೆಯಿಂದಾಗಿ ದೇವಸ್ಥಾನಕ್ಕೆ ತುಪ್ಪ ಪೂರೈಕೆ ಮಾಡುತ್ತಿದ್ದವರು ಪರಿಸ್ಥಿತಿ ಲಾಭ ಪಡೆದಿದ್ದಾರೆ. ಆಯ್ದ ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳು ಇರುವುದು ಬಹಿರಂಗಗೊಂಡಿದೆ’ ಎಂದು ಹೇಳಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಲಾಡುವಿನ ಗುಣಮಟ್ಟದ ಕುರಿತು ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದವು. ಈ ನಿಟ್ಟಿನಲ್ಲಿ ಪ್ರಯೋಗಾಲಯದ ವರದಿಯನ್ನು ತರಿಸಿಕೊಳ್ಳುವ ಸಿದ್ಧತೆಯನ್ನು ನಡೆಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿವಾದ ಕುರಿತು ಸರ್ಕಾರ ಈವರೆಗೂ ತನ್ನ ಅಧಿಕೃತ ಹೇಳಿಕೆ ನೀಡಿಲ್ಲ.

ಹಾಗಿದ್ದರೆ ಈ ವಿವಾದ ಏನು?

ವಿಶ್ವಪ್ರಸಿದ್ಧ ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ನೀಡುವ ಲಡ್ಡು, ದೇವಾಲಯದ ಅಡುಗೆ ಕೋಣೆ ‘ಪೊಟು’ವಿನಲ್ಲಿ ಸಿದ್ಧಗೊಳ್ಳುತ್ತದೆ. ಇದು ದೇವಸ್ಥಾನದ ‘ಸಂಪಂಗಿ ಪ್ರದಕ್ಷಿಣಂ’ ಎಂಬಲ್ಲಿ ಇದೆ. 

ಲಡ್ಡು ತಯಾರಿಕೆಗಾಗಿ ದೇವಸ್ಥಾನಕ್ಕೆ ಪ್ರತಿ ತಿಂಗಳು 42 ಸಾವಿರ ಕೆ.ಜಿ. ತುಪ್ಪ, 22,500 ಕೆ.ಜಿ. ಗೋಡಂಬಿ, 15 ಸಾವಿರ ಕೆ.ಜಿ. ದ್ರಾಕ್ಷಿ, 6 ಸಾವಿರ ಏಲಕ್ಕಿ, ಹಿಟ್ಟು, ಸಕ್ಕರೆ ಮತ್ತು ಕಲ್ಲು ಸಕ್ಕರೆ ಅಗತ್ಯವಿದೆ.

ತುಪ್ಪ ಪೂರೈಕೆ ಕುರಿತು ಈ ಹಿಂದೆ ಕರ್ನಾಟಕ ಹಾಲು ಒಕ್ಕೂಟವು ಹೇಳಿಕೆಯೊಂದನ್ನು ನೀಡಿತ್ತು. ‘ಟಿಟಿಡಿ ಈ ಮೊದಲು ತಮ್ಮ ಕೆಎಂಎಫ್‌ನಿಂದ ತುಪ್ಪವನ್ನು ಖರೀದಿಸುತ್ತಿತ್ತು. ಆದರೆ, ದೇವಸ್ಥಾನದ ಆಡಳಿತ ಮಂಡಳಿಯು ಅತ್ಯಂತ ಕಡಿಮೆ ಬೆಲೆಗೆ ತುಪ್ಪ ಕೇಳಿದ್ದರಿಂದ, ನಾಲ್ಕು ವರ್ಷಗಳ ಹಿಂದೆಯೇ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದಿತ್ತು.

ಹೀಗಾಗಿ ತಮಿಳುನಾಡಿನ ದಿಂಡಿಗಲ್‌ ಮೂಲದ ಡೇರಿಯಿಂದ ತುಪ್ಪ ಖರೀದಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿತ್ತು. ಈ ತುಪ್ಪದಿಂದ ತಯಾರಿಸಿದ ಲಡ್ಡುವಿನಲ್ಲಿ ಪ್ರಾಣಿ ಜನ್ಯ ವಸ್ತುಗಳು ಪತ್ತೆಯಾಗಿವೆ ಎಂದು ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ.

ತಿರುಪತಿ ಲಾಡುವಿಗೆ ವಿಶಿಷ್ಟ ಸ್ವಾದದಿಂದಾಗಿ ‘ಜಿಐ’ ಟ್ಯಾಗ್‌ ಕೂಡಾ ಲಭ್ಯವಾಗಿದೆ. ಇದಕ್ಕೆ ಬೌದ್ಧಿಕ ಆಸ್ತಿಯ ಹಕ್ಕು (ಐಪಿಆರ್‌) ಕೂಡಾ ಲಭ್ಯವಾಗಿದ್ದು, ಕೇಲವ ಅಧಿಕೃತ ಬಳಕೆದಾರರು ಮಾತ್ರ ಇದರ ಹೆಸರನ್ನು ಬಳಸಬಹುದಾಗಿದೆ.

ಗುಜರಾತ್ ಮೂಲದ ಪ್ರಯೋಗಾಲಯದ ವರದಿ ಏನು ಹೇಳಿತ್ತು?

ತಿರುಪತಿ ಲಡ್ಡುವಿನ ಗುಣಮಟ್ಟದ ಕುರಿತು ಗುಜರಾತ್‌ನಲ್ಲಿರುವ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ಜಾನುವಾರು ಪ್ರಯೋಗಾಲಯ ಎನ್‌ಡಿಡಿಬಿ ಕಾಫ್‌ ಲಿಮಿಟೆಡ್‌ ಜುಲೈ 17ರಂದು ವರದಿ ನೀಡಿತ್ತು. ಇದನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ. ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಆದರೆ ಇದು ವೈಎಸ್‌ಆರ್‌ಸಿಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ನಡೆದಿದ್ದು ಎಂಬ ಅಂಶ ಈಗ ರಾಜಕೀಯ ವಲಯದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಟಿಡಿಪಿ, ಇತರ ಪಕ್ಷಗಳ ವಾದವೇನು?

‘ವೈಎಸ್‌ಆರ್‌ಸಿಪಿ ಅಧಿಕಾರದಲ್ಲಿರುವಾಗ ತಿರುಮಲ ತಿರುಪತಿ ದೇವಸ್ಥಾನದ ಅನ್ನದಾನಂ (ಉಚಿತ ಪ್ರಸಾದ)ನಲ್ಲಿ ಕಳಪೆ ಗುಣಮಟ್ಟ ಪದಾರ್ಥಗಳನ್ನು ಬಳಸಲಾಗಿದೆ’ ಎಂದು ಚಂದ್ರಬಾಬು ನಾಯ್ಡು ಅವರ ಪುತ್ರ, ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಆರೋಪಿಸಿದ್ದರು.

ಲಡ್ಡು ಹಾಗೂ ಆಹಾರ ತಯಾರಿಕೆಯಲ್ಲಿ ಬಳಸಲಾಗುವ ತುಪ್ಪ, ತರಕಾರಿ ಹಾಗೂ ಇತರ ಪದಾರ್ಥಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ಹೇಳಿದ್ದರು.

‘ಸನಾತನ ಧರ್ಮ’ವನ್ನು ಯಾವುದೇ ರೂಪದಲ್ಲಿ ಅಪವಿತ್ರಗೊಳಿಸುವುದು ವೈಎಸ್‌ಆರ್‌ಸಿಪಿ ಪಕ್ಷದ ಗುರಿ ಎಂದು ಆಡಳಿತ ಪಕ್ಷದ ಭಾಗವಾಗಿರುವ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಆರೋಪಿಸಿದ್ದರು. 

ಈ ವಿವಾದ ಕುರಿತು ಆಂಧ್ರಪ್ರದೇಶದ ಆಡಳಿತಾರೂಢ ಪಕ್ಷದ ಭಾಗವಾಗಿರುವ ಬಿಜೆಪಿ ಪರವಾಗಿ ಕೇಂದ್ರ ಸಚಿವ ಬಂಡಿ ಸಂಜಯ ಪ್ರತಿಕ್ರಿಯಿಸಿ, ‘ಪವಿತ್ರ ಪ್ರಸಾದದ ಕುರಿತು ಯಾರೂ ಕ್ಷಮಿಸಲಾರದ ಪಾಪ ನಡೆಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಅನ್ಯ ಧರ್ಮೀಯರನ್ನು ಸೇರಿಸಿಕೊಂಡಿರುವುದೇ ಕಲಬೆರಕೆ ತುಪ್ಪದ ವಿವಾದಕ್ಕೆ ಕಾರಣವಾಗಿದೆ’ ಎಂದಿದ್ದಾರೆ.

‘ಈ ಅಪರಾಧಕ್ಕಾಗಿ ಹಿಂದಿನ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಎಲ್ಲಾ ಆರೋಪಗಳಿಗೆ ಪ್ರತ್ಯುತ್ತರ ನೀಡಿರುವ ವೈಎಸ್‌ಆರ್‌ಸಿಪಿ ರಾಜ್ಯಸಭಾ ಸದಸ್ಯ ಸುಬ್ಬಾ ರೆಡ್ಡಿ, ‘ದೇವರಿಗೆ ನಿತ್ಯ ನೈವೇದ್ಯ ಇಡುವ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸುವುದು ಎಂದರೆ ಊಹೆಗೂ ಮೀರಿದ್ದು. ದೇವಾಲಯದ ಇಂಥ ಪಾವಿತ್ರತೆಯನ್ನು ಹಾಳು ಮಾಡಿದ್ದು ಚಂದ್ರಬಾಬು ನಾಯ್ಡು ಅವರು. ಅವರ ಇಂಥ ಅತಿರೇಕದ ಹೇಳಿಕೆಗಳು ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ’ ಎಂದಿದ್ದಾರೆ.

‘ತಮ್ಮ ರಾಜಕೀಯ ಇಚ್ಛಾಶಕ್ತಿಗಾಗಿ ಯಾವ ಕೆಲಸಕ್ಕಾದರೂ ಅವರು ಹಿಂಜರಿಯುವುದಿಲ್ಲ ಎಂಬುದು ಚಂದ್ರಬಾಬು ನಾಯ್ಡು ಅವರ ಈ ಹೇಳಿಕೆ ಮೂಲಕವೇ ತಿಳಿಯಲಿದೆ. ಈ ವಿಷಯದಲ್ಲಿ ಪ್ರಮಾಣ ಮಾಡಲು ಸಿದ್ಧ’ ಎಂದು ಸವಾಲೆಸೆದಿದ್ದಾರೆ.

ಎರಡು ಬಾರಿ ಟಿಟಿಡಿ ಅಧ್ಯಕ್ಷರಾಗಿದ್ದ ವೈಎಸ್‌ಆರ್‌ಸಿಪಿಯ ಕರುಣಾಕರ ರೆಡ್ಡಿ ಅವರು ವಿರೋಧಿಗಳ ಟೀಕೆಗಳಿಗೆ ಪ್ರತ್ಯುತ್ತರ ನೀಡಿ, ‘ಜಗನ್ ವಿರುದ್ಧ ಟಿಡಿಪಿ ಸರ್ಕಾರವು ರಾಜಕೀಯ ದಾಳಿ ನಡೆಸಿದೆ’ ಎಂದಿದ್ದಾರೆ.

‘ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದಾದರೆ, ಟಿಡಿಪಿ ನೇತೃತ್ವದ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಜಗನ್ ಅವರ ಸೋದರಿಯಾಗಿರುವ, ಕಾಂಗ್ರೆಸ್‌ ನಾಯಕಿ ವೈ.ಎಸ್. ಶರ್ಮಿಳಾ ಅವರು ಆಗ್ರಹಿಸಿದ್ದಾರೆ. ಕಳೆದ ಜನವರಿಯಲ್ಲಿ ಜಗನ್ ಹಾಗೂ ಟಿಡಿಪಿಯನ್ನು ಟೀಕಿಸಿದ ನಂತರ ಇಬ್ಬರ ನಡುವೆ ಸಂಬಂಧ ಹಳಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT