ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸಾಕಾರವಾಗದ ಹೊಗೆರಹಿತ ಅಡುಗೆಮನೆ

ಉಜ್ವಲ ಮರು ಸಿಲಿಂಡರ್‌ ಖರೀದಿ ಸೀಮಿತ
Last Updated 15 ಜುಲೈ 2019, 19:35 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಹಳ್ಳಿಗಳ ಬಡ ಮಹಿಳೆಯರಿಗೆ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಮೊದಲ ಸಿಲಿಂಡರ್‌ ಅನ್ನು ಕೂಡ ಉಚಿತವಾಗಿ ಹಂಚಲಾಗುತ್ತಿದೆ. ಆದರೆ, ಅದು ಮುಗಿದ ಬಳಿಕ ಸಿಲಿಂಡರ್‌ ಖರೀದಿಸುವ ಸಾಮರ್ಥ್ಯ ಈ ಮಹಿಳೆಯರಿಗೆ ಇಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.

‘ಹೊಗೆರಹಿತ ಅಡುಗೆ ಮನೆ’ ಎಂಬ ಪರಿಕಲ್ಪನೆಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ, ಮೊದಲ ಸಿಲಿಂಡರ್‌ ಮುಗಿದ ಬಳಿಕ ಮಹಿಳೆಯರು ಮತ್ತೆ ಮಾಲಿನ್ಯಕಾರಕ ಉರುವಲಿನ ಮೊರೆ ಹೋಗುತ್ತಿದ್ದಾರೆ. ಇದು ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ವ್ಯಾಂಕೋವರ್‌ನ ಬ್ರಿಟಿಷ್‌ ಕೊಲಂಬಿಯಾ ವಿಶ್ವವಿದ್ಯಾಲಯ, ಆಸ್ಟ್ರಿಯಾದ ಇಂಟರ್‌ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಅಪ್ಲೈಡ್‌ ಸಿಸ್ಟಮ್ಸ್‌ ಅನಾಲಿಸಿಸ್‌ ಮತ್ತು ಮೆಸಾಚುಸೆಟ್ಸ್‌ನ ಸ್ಟಾಕ್‌ಹೋಮ್‌ ಎನ್‌ವಿರಾನ್‌ಮೆಂಟ್‌ ಇನ್ಸ್‌ಟಿಟ್ಯೂಟ್‌ ಜತೆಯಾಗಿ ಈ ಸಮೀಕ್ಷೆ ನಡೆಸಿವೆ.

ಅಡುಗೆಗೆ ಎಲ್‌ಪಿಜಿ ಬಳಸಲು ಆರಂಭಿಸಿದರೆ ಅದರ ಪ್ರಯೋಜನವನ್ನು ಅರ್ಥ ಮಾಡಿಕೊಳ್ಳುವ ಮಹಿಳೆಯರು ಅದನ್ನೇ ಮುಂದುವರಿಸುತ್ತಾರೆ ಎಂಬ ಗ್ರಹಿಕೆಯನ್ನು ಇಟ್ಟುಕೊಂಡು ಯೋಜನೆ ಜಾರಿ ಮಾಡಲಾಗಿತ್ತು.

ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಮಾರಾಟದ ಬಗ್ಗೆ ನಡೆಸಿದ ಸಮೀಕ್ಷೆಯು ಈ ಗ್ರಹಿಕೆಯನ್ನು ಸಮರ್ಥಿಸುತ್ತಿಲ್ಲ. ಉಜ್ವಲ ಯೋಜನೆಯಿಂದಾಗಿ ಎಲ್‌ಪಿಜಿ ಸಂಪರ್ಕ ಹೆಚ್ಚಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟವು ಅದೇ ಪ್ರಮಾಣದಲ್ಲಿ ಏರಿಕೆ ಆಗಿಲ್ಲ. ಹಾಗಾಗಿ, ಈಗಲೂ ಅಡುಗೆಗೆ ಎಲ್‌ಪಿಜಿ ಬಳಕೆ ಸೀಮಿತವಾಗಿಯೇ ಇದೆ ಎನ್ನಬೇಕಾಗಿದೆ.

2017ರ ಜೂನ್‌ನಲ್ಲಿ ಕೊಪ್ಪಳದಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. 2018ರ ಡಿಸೆಂಬರ್‌ ಹೊತ್ತಿಗೆ ಉಜ್ವಲ ಯೋಜನೆಯ ಗ್ರಾಹಕರ ಸಂಖ್ಯೆ ಸುಮಾರು 15 ಸಾವಿರ ಇತ್ತು. ಇತರ ಎಲ್‌ಪಿಜಿ ಗ್ರಾಹಕರ ಸಂಖ್ಯೆ 12,500 ಇತ್ತು.

2018ರ ಡಿಸೆಂಬರ್‌ನಲ್ಲಿ ಉಜ್ವಲ ಗ್ರಾಹಕರು ದಿನವೊಂದಕ್ಕೆ 50 ಸಿಲಿಂಡರ್‌ ಮಾತ್ರ ಖರೀದಿಸಿದ್ದಾರೆ. ಆದರೆ ಇತರ ಗ್ರಾಹಕರು ದಿನಕ್ಕೆ ಖರೀದಿಸಿದ ಸಿಲಿಂಡರ್‌ ಸಂಖ್ಯೆ 150.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 30 ರಾಜ್ಯಗಳಿಂದ ಉಜ್ವಲ ಯೋಜನೆಯ ದತ್ತಾಂಶವನ್ನು ಸಂಗ್ರಹಿಸಿದೆ. ಅದರ ಪ್ರಕಾರ, ಸಂಪರ್ಕ ಪಡೆದುಕೊಂಡು ಒಂದು ವರ್ಷ ಪೂರ್ಣಗೊಂಡವರಲ್ಲಿ ಶೇ 24ರಷ್ಟು ಗ್ರಾಹಕರು ಮರಳಿ ಸಿಲಿಂಡರ್‌ ಖರೀದಿಸಿಲ್ಲ. ಶೇ 28ರಷ್ಟು ಗ್ರಾಹಕರು ಐದು ಅಥವಾ ಅದಕ್ಕಿಂತ ಹೆಚ್ಚು ಸಿಲಿಂಡರ್‌ ಖರೀದಿಸಿದ್ದಾರೆ.

**

ಹೊಗೆರಹಿತ ಅಡುಗೆಮನೆ ಪರಿಕಲ್ಪನೆ ನಿಜ ಅರ್ಥದಲ್ಲಿ ಜಾರಿಗೆ ಬರಬೇಕಿದ್ದರೆ, ಅಡುಗೆ ಅನಿಲ ಬಳಸುವುದಕ್ಕೆ ಉಜ್ವಲ ಯೋಜನೆ ಅಡಿ ಇನ್ನಷ್ಟು ಉತ್ತೇಜನ ನೀಡುವ ಅಗತ್ಯ ಇದೆ

- ಅಭಿಷೇಕ್‌ ಕರ್‌, ಬ್ರಿಟಿಷ್‌ ಕೊಲಂಬಿಯಾ ವಿ.ವಿ.ಯ ಸಂಶೋಧಕ

**

ಅಂಕಿ ಅಂಶ

5,848 - ಕೊಪ್ಪಳ ಜಿಲ್ಲೆಯಲ್ಲಿ ಒಂದು ವರ್ಷ ಪೂರೈಸಿದ ಉಜ್ವಲ ಗ್ರಾಹಕ ಸಂಖ್ಯೆ

ಶೇ 35- ಮೊದಲ ವರ್ಷದಲ್ಲಿ ಮರು ಸಿಲಿಂಡರ್‌ ಖರೀದಿಸದವರ ಪ್ರಮಾಣ

ಶೇ 7- ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಿಲಿಂಡರ್‌ ಖರೀದಿಸಿದವರ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT