ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

Published 8 ಮಾರ್ಚ್ 2024, 6:23 IST
Last Updated 8 ಮಾರ್ಚ್ 2024, 6:23 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.

ಮಹಿಳಾ ದಿನದ ಈ ಸಂದರ್ಭದಲ್ಲಿ ಸಿಲಿಂಡರ್‌ ಬೆಲೆಯನ್ನು ₹100 ಕಡಿಮೆ ಮಾಡುವ ನಿರ್ಧಾರ ಮಾಡಲಾಗಿದೆ. ಇದರಿಂದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗಲಿದ್ದು ನಾರಿಯರ ಶಕ್ತಿಗೆ ಬಲ ತುಂಬಲಿದೆ ಎಂದು ಹೇಳುವ ಮೂಲಕ ಮಹಿಳೆಯರಿಗೆ ಶುಭಾಶಯ ಕೋರುವುದರ ಜೊತೆಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್‌ ನೀಡಿದ್ದಾರೆ.

ಸಮಾಜದ ಅಭಿವೃದ್ಧಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಮಾಪನ ಮಾಡಲಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಹಾಗೂ ಅವಳ ಅಗತ್ಯ ಒತ್ತಿ ಹೇಳಲು ಮಹಿಳಾ ದಿನ ಒಂದು ಪ್ರಮುಖ ಸಂದರ್ಭವಾಗಿದೆ. ಇಂದಿಗೂ ಮಹಿಳೆಯರು ಹಲವು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಕಷ್ಟಗಳಿಂದ ಅವರನ್ನು ಹೊರತರಬೇಕು ಎಂದು ರಾಷ್ಟ್ರಪತಿ ಮುರ್ಮು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಲಿಂಗ ಸಮಾನತೆ ಪ್ರಗತಿಪರ ಸಮಾಜದ ವಿಶಿಷ್ಟ ಲಕ್ಷಣವಾಗಿದೆ. ಗಂಡು–ಹೆಣ್ಣಿನ ತಾರತಮ್ಯ ಸರಪಳಿಗಳನ್ನು ಮುರಿದು, ಲಿಂಗ ಸಮಾನತೆ ಅನುಸರಿಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರು ಸಮಾನ ಪಾಲುದಾರರಾಗಿದ್ದು ಅವರನ್ನು ಉತ್ತೇಜಿಸುವ ಎಲ್ಲಾ ಕೆಲಸಗಳನ್ನು ಮಾಡಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಸ್ವಾವಲಂಬಿ ಬದುಕಿನ ಕನಸು ಕಟ್ಟಿಕೊಂಡಿರುವ ನಾಡಿನ ಕೋಟ್ಯಂತರ ಸ್ವಾಭಿಮಾನಿ ಮಹಿಳೆಯರ ಜೊತೆ ನಾವಿದ್ದೇವೆ. ನಮ್ಮ ಶಕ್ತಿ, ಗೃಹಲಕ್ಷ್ಮಿ, ಕೂಸಿನಮನೆ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಮಹಿಳೆಯರಲ್ಲಿ ಆರ್ಥಿಕ, ಸಾಮಾಜಿಕ ಬಲತುಂಬಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನವಯುಗಕ್ಕೆ ನಾಂದಿ ಹಾಡಿವೆ. ಕರ್ನಾಟಕದಲ್ಲೀಗ ಅನುದಿನವೂ‌ ಮಹಿಳಾ ದಿನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದ್ದಾರೆ.

ಜನನಕ್ಕೆ ತಾಯಿಯಾಗಿ, ಸಹಕಾರಕ್ಕೆ ಸಹೋದರಿಯಾಗಿ, ಸಲಹೆಗೆ ಸ್ನೇಹಿತೆಯಾಗಿ, ಸಂಸಾರಕ್ಕೆ ಮಗಳಾಗಿ, ಜನನದಿಂದ ಮರಣದವರೆಗೂ ಜೊತೆಯಾಗಿ ಬರುವ ಹೆಣ್ಣು ನಮ್ಮೆಲ್ಲರ ಬದುಕಿನ ಕಣ್ಣು. ಅಂತರರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT