ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
Women's Day; ಮಹಿಳಾ ಮತ | ಅವಳಿಲ್ಲದ ಆರ್ಥಿಕತೆ...ಮತ್ತು ತೀವ್ರ ಬಡತನ
Women's Day; ಮಹಿಳಾ ಮತ | ಅವಳಿಲ್ಲದ ಆರ್ಥಿಕತೆ...ಮತ್ತು ತೀವ್ರ ಬಡತನ
Published 7 ಮಾರ್ಚ್ 2024, 22:08 IST
Last Updated 7 ಮಾರ್ಚ್ 2024, 22:08 IST
ಅಕ್ಷರ ಗಾತ್ರ
ತೀವ್ರ ಬಡತನದಿಂದ ಬಳಲುವ ಮಹಿಳೆಯರ ಪ್ರಮಾಣವು ಮುಂದಿನ ಆರು ವರ್ಷಗಳಲ್ಲಿ ಹೆಚ್ಚಾಗಲಿದೆ. 2030ರ ಹೊತ್ತಿಗೆ ಪ್ರತಿ 10 ಮಹಿಳೆಯರಲ್ಲಿ ಒಬ್ಬ ಮಹಿಳೆ ಬಡವಳಾಗುತ್ತಾಳೆ. ಅದೇ ವೇಳೆಗೆ ಜಗತ್ತಿನಾದ್ಯಂತ, ದಿನವೊಂದರಲ್ಲಿ ಕನಿಷ್ಠ 2.15 ಡಾಲರ್‌ (ಅಂದಾಜು ₹177.8) ವೆಚ್ಚ ಮಾಡಲಾಗದ ಮಹಿಳೆಯರ ಸಂಖ್ಯೆ 34.24 ಕೋಟಿಗೆ ಏರಿಕೆಯಾಗಲಿದೆ ಎಂದೂ ವಿಶ್ವ ಸಂಸ್ಥೆ ಅಂದಾಜಿಸಿದೆ. ಇಷ್ಟೇ ಅಲ್ಲ, ಪುರುಷರಿಗೆ ಹೋಲಿಸಿದರೆ ಮಹಿಳೆಯೇ ಬಡವಳು. 2030ರ ಹೊತ್ತಿಗೆ ತೀವ್ರ ಬಡತನಕ್ಕೆ ದೂಡಲ್ಪಡುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ 1.2 ಪಟ್ಟು ಹೆಚ್ಚು ಎಂದಿದೆ ವಿಶ್ವ ಸಂಸ್ಥೆ. ಭಾರತದ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ

ಮಾಡಲೊಂದು ಕೆಲಸ, ಅದರಿಂದ ಬರುವ ಸಂಬಳ –ಮಹಿಳೆಯೊಬ್ಬಳಿಗೆ ಇವುಗಳು ನೀಡುವಷ್ಟು ಆತ್ಮವಿಶ್ವಾಸ ಬೇರಾವುದರಿಂದಲೂ ಬರುವುದಿಲ್ಲ. ಆರ್ಥಿಕ ಬಲವು ಆಕೆಯನ್ನು ಹೆಚ್ಚು ಸಶಕ್ತ, ಸ್ವಾವಲಂಬಿ ಹಾಗೂ ಸ್ವತಂತ್ರ ವ್ಯಕ್ತಿಯನ್ನಾಗಿಸುತ್ತದೆ. ಮಹಿಳೆಯರು ಆರ್ಥಿಕವಾಗಿ ಹೆಚ್ಚು ಹೆಚ್ಚು ಚೇತನರಾಗುವ ಬದಲು, ಮುಂದಿನ ಆರು ವರ್ಷಗಳಲ್ಲಿ ತೀವ್ರ ಬಡತನಕ್ಕೆ ನೂಕಲ್ಪಡುತ್ತಾರೆ ಎನ್ನುವುದು ಯಾವುದೇ ಸಮಾಜಕ್ಕಾದರೂ ಸರಿ, ಒಳ್ಳೆಯ ಬೆಳವಣಿಗೆಯೇನಲ್ಲ. ಮಹಿಳೆಯ ಆರ್ಥಿಕ ಸಧೃಡತೆಯ ಕುರಿತು ಭಾರತೀಯರ ಮನಃಸ್ಥಿತಿಯೂ ಇನ್ನು ಸಾಂಪ್ರದಾಯಿಕವಾಗಿಯೇ ಇದೆ.

ಮನೆಗೆಲಸ ಎನ್ನುವುದರಲ್ಲಿಯೇ ‘ಕೆಲಸ’ ಎಂಬುದಿದೆ. ಆದರೆ, ಈ ಕೆಲಸಕ್ಕೆ ಮಾತ್ರ ಸಂಬಳ ಇಲ್ಲ ಮತ್ತು ಇದನ್ನು ಯಾವುದೇ ಹೆಣ್ಣು ಮಾಡತಕ್ಕದ್ದು ಎಂಬ ನಿಯಮವಿದೆ. ನಗರ ಪ್ರದೇಶದ, ಮಧ್ಯಮ ವರ್ಗದ ಅಥವಾ ಅದಕ್ಕಿಂತ ಮೇಲಿನ ವರ್ಗದ ಕುಟುಂಬವು ತಮ್ಮ ಮಗನಿಗೆ ಹೆಣ್ಣು ಹುಡುಕುವಾಗ ಹಾಕುವ ಮೊದಲ ಷರತ್ತು– ‘ಮದುವೆ ಆದ ಮೇಲೆ ಆಕೆ ಕೆಲಸಕ್ಕೆ ಹೋಗುವುದು ಬೇಡ’ ಎನ್ನುವುದೇ ಆಗಿರುತ್ತದೆ. ‘ಮನೆಗೆಲಸ’ ನೋಡಿಕೊಂಡರೆ ಸಾಕು ಎನ್ನುವುದು ಅಂಥ ಕುಟುಂಬಗಳ ಅಭಿಪ್ರಾಯ. ಶಿಕ್ಷಣ ಮುಗಿಸಿ, ಉದ್ಯೋಗಕ್ಕೆ ಸೇರಿಕೊಂಡ 2–3 ವರ್ಷಗಳಲ್ಲಿಯೇ ಹೆಣ್ಣುಮಕ್ಕಳ ಮದುವೆ ತಯಾರಿಗೆ ಪೋಷಕರ ಶುರುವಿಡುತ್ತಾರೆ. ಕೆಲಸಕ್ಕೆ ಹೋಗುವ ಸಾಮರ್ಥ್ಯವಿದ್ದರೂ, ಕೆಲಸಕ್ಕೆ ಹೋಗುವ ಮನಸ್ಸಿದ್ದರೂ, ಮನೆಗೆಲಸಕ್ಕೆ ಮಾತ್ರ ಸೀಮಿತವಾಗುವ ಪರಿಸ್ಥಿತಿ ಹೆಣ್ಣುಮಕ್ಕಳದ್ದು.

ಸಂಬಳ ಕೊಡದ ಅಥವಾ ಸಂಬಳ ನೀಡದ ಕೆಲಸಗಳನ್ನೇ ಮಹಿಳೆಯರು ಹೆಚ್ಚು ಮಾಡುತ್ತಾರೆ. ಇದು ಹೀಗೆ ಮುಂದುವರಿದರೆ ಹೆಣ್ಣೊಬ್ಬಳು ದಿನವೊಂದಕ್ಕೆ ಈಗ ವೇತನವಿಲ್ಲದೇ ದುಡಿಯುತ್ತಿರುವುದಕ್ಕಿಂತಲೂ (ಸರಾಸರಿ 7 ಗಂಟೆ) ಹೆಚ್ಚುವರಿಯಾಗಿ 2.3 ಗಂಟೆಗಳನ್ನು ವಿನಿಯೋಗಿಸಬೇಕಾಗುತ್ತದೆ. ಒಂದು ವೇಳೆ ಕೆಲವು ದೇಶಗಳಲ್ಲಿ ಇಂಥ ಕೆಲಸಕ್ಕೆ ಹೆಣ್ಣೊಬ್ಬಳಿಗೆ ಸಂಬಳ ನೀಡಲು ಆರಂಭಿಸಿದರೆ, ಆ ದೇಶಗಳ ಜಿಡಿಪಿಯಲ್ಲಿ ಶೇ 40ರಷ್ಟು ಪಾಲು ಈ ಸಂಬಳದಿಂದಲೇ ಬರುತ್ತದೆ ಎನ್ನುತ್ತದೆ ವಿಶ್ವ ಸಂಸ್ಥೆ.

ಬ್ಯಾಂಕ್‌ ಖಾತೆ ಎಂಬುದು ಮಹಿಳೆಯನ್ನು ಬ್ಯಾಂಕಿಂಗ್‌ ವ್ಯವಸ್ಥೆ ಒಳಗೊಳ್ಳುವ ಪ್ರಮುಖ ಹೆಜ್ಜೆ. ವಿಶ್ವದಲ್ಲಿ ಬ್ಯಾಂಕ್‌ ಖಾತೆ ಹೊಂದಿರುವ ಮಹಿಳೆಯರ ಪ್ರಮಾಣ ಶೇ 74ರಷ್ಟಿದೆ. ಭಾರತದಲ್ಲಿ ಈ ಸ್ಥಿತಿ ಉತ್ತಮವಾಗಿದೆ. ವಿಧವಾ ವಿವಾಹ, ಸಂಧ್ಯಾ ಸುರಕ್ಷಾ, ಗೃಹಲಕ್ಷ್ಮಿ ಸೇರಿದಂತೆ ಹಲವು ಯೋಜನೆಗಳ ಭಾಗವಾಗಿ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗಳನ್ನು ತೆರೆದರು. ನರೇಗಾ ಯೋಜನೆಯಂತೂ ಗ್ರಾಮೀಣ ಹೆಣ್ಣುಮಕ್ಕಳ ಬ್ಯಾಂಕ್ ಖಾತೆ ಸಂಖ್ಯೆಯನ್ನು ದ್ವಿಗುಣಗೊಳಿಸಿತು. ಸ್ವ–ಸಹಾಯ ಸಂಘಗಳ ಪ್ರಗತಿ ಹೀಗೆ ಹಲವು ಕಾರಣಗಳಿಂದಾಗಿ ಮಹಿಳೆಯರು ತೆರೆಯುವ ಬ್ಯಾಂಕ್‌ ಖಾತೆಗಳ ಸಂಖ್ಯೆ ಹೆಚ್ಚಾಯಿತು.

ಮುಂದಿನ ದಿನಗಳಲ್ಲಿ ಮಹಿಳೆಯರು ಬಡತನಕ್ಕೆ ಬೀಳದಂತೆ ವಿಶ್ವ ಸಂಸ್ಥೆ ಹಾಕಿಕೊಟ್ಟಿರುವ ಗುರಿಗಳನ್ನು ಎಲ್ಲಾ ದೇಶಗಳು ಸಾಧಿಸಬೇಕಿದೆ. ದೇಶದ ಆರ್ಥಿಕತೆಯಲ್ಲಿ ಮಹಿಳೆಯನ್ನು ಪರಿಣಾಮಕಾರಿಯಾಗಿ ಒಳಗೊಳ್ಳಬೇಕಿರುವ ಈ ಅಂಶಗಳತ್ತ ಗಮಹರಿಸಬೇಕಿದೆ. ಹಾಗಾದಾಗ ಮಾತ್ರ, ವಿಶ್ವದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರೂ ಗೌರವಯುತವಾಗಿ ಬದುಕು ನಡೆಸಲು ಸಾಧ್ಯವಾಗುತ್ತದೆ.

ಬ್ಯಾಂಕಿಂಗ್‌ ಸೇವೆ ಲಭ್ಯತೆ ಮಹಿಳೆಯರಿಗೆ ಇನ್ನೂ ದೂರ

ದೇಶದ ಒಟ್ಟು ಮಹಿಳೆಯರಲ್ಲಿ ಬ್ಯಾಂಕ್ ಖಾತೆ ಹೊಂದಿರುವವರ ಪ್ರಮಾಣ ಶೇ 78ರಷ್ಟಿದೆ. ಬ್ಯಾಂಕ್‌ ಖಾತೆ ಹೊಂದಿರುವುದು ಮಹಿಳೆಯರ ಸಬಲೀಕರಣಕ್ಕೆ ಒಂದು ಸಾಧನವಾಗಲಿದೆ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್‌ ಖಾತೆ ಹೊಂದಿರುವುದು ಮತ್ತು ಅದನ್ನು ಮಹಿಳೆಯರು ತಾವೇ ನಿರ್ವಹಣೆ ಮಾಡುವಂತಹ ಸ್ಥಿತಿ ಇದ್ದರೆ, ಅವರು ಮನೆಕೆಲಸದ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತದೆ. ಹೀಗಾಗಿ ಬ್ಯಾಂಕಿಂಗ್‌ ವ್ಯವಸ್ಥೆಯು ಮಹಿಳೆಯರನ್ನು ಒಳಗೊಳ್ಳಬೇಕು ಎಂದು ವಿಶ್ವ ಸಂಸ್ಥೆ ಹೇಳಿದೆ.

ಭಾರತದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯು ಮಹಿಳೆಯರನ್ನು ಒಳಗೊಳ್ಳುತ್ತದೆಯಾದರೂ, ಮಹಿಳೆಯರು ಹಣಕಾಸು ವ್ಯವಹಾರದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವ ಪ್ರಮಾಣ ಕಡಿಮೆ ಇದೆ. ದೇಶದಲ್ಲಿ 10 ಕೋಟಿಗೂ ಹೆಚ್ಚು ಜನಧನ ಖಾತೆಗಳು ನಿಷ್ಕ್ರಿಯವಾಗಿವೆ. ಅಂತಹ ಖಾತೆಗಳಲ್ಲಿ ಮಹಿಳೆಯರ ಖಾತೆಗಳದ್ದೇ ಸಿಂಹಪಾಲು ಎಂದು ಇತ್ತೀಚೆಗೆ ಹಣಕಾಸು ಸಚಿವಾಲಯವು ಸಂಸತ್ತಿಗೆ ಮಾಹಿತಿ ನೀಡಿತ್ತು.

ವೃದ್ಧ ಬಡವೆಯರು

55ರಿಂದ 59 ವಯೋಮಾನದ ಮಹಿಳೆಯರು ಪ್ರಸ್ತುತ ತೀವ್ರ ಬಡತನವನ್ನು ಎದುರಿಸುತ್ತಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆ. ಹಿರಿಯ ವಯೋಮಾನದ ಪುರುಷರಿಗೆ ಹೋಲಿಸಿಕೊಂಡರೆ, ಹಿರಿಯ ವಯೋಮಾನದ ಮಹಿಳೆಯರು ಎಲ್ಲ ಆಯಾಮದಲ್ಲೂ ಹೆಚ್ಚು ಅಶಕ್ತರಾಗಿರುತ್ತಾರೆ. ಹೆಚ್ಚು ವಯಸ್ಸಾಗಿರುವ ಮಹಿಳೆಯರಲ್ಲಿ ವಿಧವೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಜೊತೆಗೆ ಇವರ್‍ಯಾರೂ ಮರುಮದುವೆ ಆಗುವುದಿಲ್ಲ ಮತ್ತು ಒಂಟಿಯಾಗಿಯೇ ಜೀವನ ನಡೆಸಲು ಇಚ್ಛಿಸುತ್ತಾರೆ. ಇವೇ ಕಾರಣಗಳಿಂದ ಹಿರಿಯ ವಯಸ್ಸಿನ ಮಹಿಳೆಯರು ಹೆಚ್ಚು ಸಂಕಷ್ಟ ಅನುಭವಿಸುತ್ತಾರೆ. ಮಕ್ಕಳಿಂದ ದೂರ ಇರುವುದು, ಪಿಂಚಣಿ ಬರದೇ ಇರುವುದು, ಉಳಿತಾಯ ಹಣ ಇಲ್ಲದೆ ಇರುವುದು... ಹೀಗೆ ಅನೇಕ ಕಾರಣಗಳಿಂದಾಗಿ ವೃದ್ಧ ಮಹಿಳೆಯರು ತೀವ್ರ ಬಡತನ ಎದುರಿಸುತ್ತಿದ್ದಾರೆ.

ದುಡಿಮೆಯಿಂದ ದೂರ

ದೇಶದ ಆರ್ಥಿಕತೆಯಲ್ಲಿ ಕಾರ್ಮಿಕರ ಭಾಗವಹಿಸುವಿಕೆಯಲ್ಲಿ ಮಹಿಳೆಯರ ಪಾಲು ಶೇ 37ರಷ್ಟು ಮಾತ್ರ. ಅಂದರೆ ದೇಶದ ಒಟ್ಟು ಮಹಿಳೆಯರಲ್ಲಿ ದುಡಿಯುವ ಸಾಮರ್ಥ್ಯ, ದುಡಿಯುವ ವಯಸ್ಸು ಮತ್ತು ದುಡಿಯುವ ಅರ್ಹತೆ ಇದ್ದೂ ಯಾವುದೇ ರೀತಿಯ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸದೇ ಇರುವ ಮಹಿಳೆಯರ ಪ್ರಮಾಣ ಶೇ 63ರಷ್ಟಿದೆ ಎನ್ನುತ್ತದೆ ‘ಲೇಬರ್ ಫೋರ್ಸ್‌ ಪಾರ್ಟಿಸಿಪೇಶನ್‌ ರೇಟ್‌ ವರದಿ–2023’.

ಅಂದರೆ ಮಹಿಳೆಯರಿಗೆ ಅಗತ್ಯ ಉದ್ಯೋಗಾವಕಾಶಗಳು ಇಲ್ಲದೇ ಇರುವುದನ್ನು ಮತ್ತು ಉದ್ಯೋಗಾವಕಾಶಗಳು ಇದ್ದರೂ, ಕೆಲಸ ಮಾಡುವಂತಹ ವಾತಾವರಣ ಇಲ್ಲದೇ ಇರುವಂತಹ ಸ್ಥಿತಿಯನ್ನು ಈ ದತ್ತಾಂಶಗಳು ವಿವರಿಸುತ್ತವೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮತ್ತು ಉದ್ಯೋಗದ ಸ್ಥಳದಲ್ಲಿ ವಾತಾವರಣ ಸುಧಾರಿಸುವಂತಹ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT