ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಕೃಷಿ, ಸಂಸ್ಕೃತಿಯ ಯುವ ರಾಯಭಾರಿ ನೀಲಮ್ಮ!

Published 8 ಮಾರ್ಚ್ 2024, 5:49 IST
Last Updated 8 ಮಾರ್ಚ್ 2024, 5:49 IST
ಅಕ್ಷರ ಗಾತ್ರ

ಗದಗ: ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೀಲಮ್ಮ ಅವರು ಯುವ ಮನಸ್ಸುಗಳಲ್ಲಿ ಕೃಷಿಯ ಬಗ್ಗೆ ಕನಸು ಬಿತ್ತುವ ಕೆಲಸವನ್ನೂ ಮಾಡುತ್ತಿದ್ದಾರೆ. ತಮ್ಮ ಸ್ಫೂರ್ತಿದಾಯಕ ಮಾತುಗಳ ಮೂಲಕ ಉತ್ತಮ ಫಸಲನ್ನೂ ತೆಗೆದಿದ್ದಾರೆ.

ಕೃಷಿ ಕುಟುಂಬದಿಂದ ಬಂದಿರುವ ನೀಲಮ್ಮ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪದವೀಧರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಅಗ್ರಿಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪೂರೈಸಿದ್ದು, ಯುವಜನರನ್ನು ದೊಡ್ಡ ಪ್ರಮಾಣದಲ್ಲಿ ತಲುಪಲು ನೆರವಾಗುತ್ತದೆ ಎಂಬ ಕಾರಣಕ್ಕೆ ಬೋಧಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಅಗ್ರಿ ಬ್ಯುಸಿನೆಸ್‌ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೃಷಿಯನ್ನು ಲಾಭದಾಯಕವಾಗಿಸುವುದು ಹೇಗೆ ಎಂಬುದರ ಬಗ್ಗೆ ಸದಾಕಾಲ ಪ್ರೇರಣೆ, ಮಾರ್ಗದರ್ಶನ ನೀಡುತ್ತಿದ್ದಾರೆ.

ಭಾರತದ ಅಸ್ಮಿತೆಯಾದ ಕೃಷಿಯ ಜತೆಗೆ ಯೋಗ ಮತ್ತು ಅಧ್ಯಾತ್ಮ ಕೂಡ ಬೆಸೆದುಕೊಂಡಿದೆ ಎಂಬುದು ಇವರ ನಿಲುವು. ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ಪಂಚಭೂತಗಳೊಂದಿಗೆ ಬೆರೆಯುತ್ತೇವೆ. ಕೃಷಿಯಿಂದ ಮಣ್ಣು, ಗಾಳಿ, ನೀರು ಹೀಗೆ ಇಡೀ ಪ್ರಕೃತಿಯೇ ರಕ್ಷಣೆ ಆಗುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದ್ದಾರೆ.

ಮೊದಲು ಕೃಷಿ ಅಂದರೆ ಹೊಟ್ಟೆಪಾಡಾಗಿತ್ತು. ಆದರೆ, ಈಗ ಕೃಷಿ ಮಗ್ಗಲು ಬದಲಿಸಿದ್ದು, ಜಗದ ಪಾಡಾಗಿದೆ. ಅಗ್ರಿಕಲ್ಚರ್‌ ಈಗ ಬ್ಯುಸಿನೆಸ್‌ ಆಗಿ ಬದಲಾಗಿದೆ. ವ್ಯಾಪಾರ ವಹಿವಾಟು ಅಂದರೆ ಮೋಸ ಮಾಡುವುದಲ್ಲ. ವೃತ್ತಿಬದ್ಧತೆ ಇಟ್ಟುಕೊಂಡು ಮೇಲೇರುವುದಾಗಿದೆ. ರಾಸಾಯನಿಕ ಬದಿಗಿಟ್ಟು, ಕಡಿಮೆ ವೆಚ್ಚದಲ್ಲಿ ಸಾಂಪ್ರದಾಯಿಕ ಕೃಷಿ ಮಾಡಿ ಅಧಿಕ ಲಾಭಗಳಿಸುವ ಸಾಧ್ಯತೆಗಳನ್ನು ಇವರು ಯುವ ಮನಸ್ಸುಗಳಿಗೆ ಹೇಳಿಕೊಡುತ್ತಿದ್ದಾರೆ.

ಕೃಷಿಯ ವೈಭವವನ್ನು ಮರುಕಳಿಸುವಂತೆ ಮಾಡುವುದೇ ನನ್ನ ಉದ್ದೇಶ ಎನ್ನುವ ನೀಲಮ್ಮ ಅವರು, ಆ ನಿಟ್ಟಿನಲ್ಲಿ ತಂತ್ರಜ್ಞಾನ ಮತ್ತು ನಮ್ಮ ದೇಸಿ ಸಂಸ್ಕೃತಿಯನ್ನು ಹದವಾಗಿ ಮಿಳಿತಗೊಳಿಸಿ ಹೇಗೆ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕು ಎಂಬುದರ ಪಾಠವನ್ನೂ ಮಾಡುತ್ತಿದ್ದಾರೆ. ಇವರ ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರಣೆಗೊಂಡ ಅನೇಕು ಯುವಕರು ಈಗ ಲಾಭದಾಯಕ ಕೃಷಿ ನಡೆಸುತ್ತಿದ್ದಾರೆ.

ನೀಲಮ್ಮ ಆರ್‌.
ನೀಲಮ್ಮ ಆರ್‌.

ಹೆಣ್ಣುಮಕ್ಕಳು ಫ್ಯಾಂಟಸಿ ವರ್ಲ್ಡ್‌ನಿಂದ ಆಚೆ ಬರಬೇಕು

ಯುವಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುತ್ತಿರುವ ನೀಲಮ್ಮ ಅವರು ಈಗಿನ ಬಹುತೇಕ ಹೆಣ್ಣುಮಕ್ಕಳು ಫ್ಯಾಂಟಸಿ ವರ್ಲ್ಡ್‌ನಲ್ಲೇ ಬದುಕುತ್ತಿದ್ದಾರೆ ಎಂಬ ಬೇಸರ ಹೊರ ಚೆಲ್ಲುತ್ತಾರೆ. ಜಗತ್ತು ಆ ರೀತಿ ಇಲ್ಲ. ಈಗಿನ ಬಹುತೇಕ ಯುವತಿಯರಿಗೆ ಈ ಜಗತ್ತನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಹೆಣ್ಣುಮಕ್ಕಳು ಭ್ರಮಾ ಜಗತ್ತಿನಿಂದ ವಾಸ್ತವಲೋಕಕ್ಕೆ ಬರಬೇಕು ಎಂಬ ಸಲಹೆಯನ್ನೂ ನೀಡುತ್ತಾರೆ. ‘ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ. ಆದರೆ ಇಂದಿನ ಅನೇಕ ಹೆಣ್ಣುಮಕ್ಕಳಿಗೆ ಅದು ಔಟ್‌ಡೇಟೆಡ್‌ ಫ್ಯಾಷನ್‌ ಎನಿಸಿದೆ. ನಾವು ಹಣೆಯಲ್ಲಿ ಕುಂಕುಮ ಕೈಗೆ ಬಳೆ ಧರಿಸುವುದರ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಯುವತಿಯರು ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಹೊಂದಬೇಕು. ಹೆಣ್ಣುಮಕ್ಕಳು ಸುಸಂಸ್ಕೃತರಾದರೆ ಕುಟುಂಬ ಚೆನ್ನಾಗಿರುತ್ತದೆ. ಸಮಾಜ ಚೆಂದಗೊಳ್ಳುತ್ತದೆ. ಹಾಗಾಗಿ ಆರೋಗ್ಯವಂತ ಯುವತಿ ಮಾತ್ರ ಆರೋಗ್ಯವಂತ ಸಮಾಜ ಕಟ್ಟಬಲ್ಲಳು. ಹಾಗಾಗಿ ನಾವೆಲ್ಲರೂ ಸ್ವಾತಂತ್ರ್ಯದ ಜತೆಗೆ ಸಂಸ್ಕೃತಿ ಅಳವಡಿಸಿಕೊಂಡು ಬದುಕುವುದನ್ನು ಕಲಿಯಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT