ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿಯಲ್ಲಿ ಮತ್ತೆ ಪ್ರತಿಭಟನೆ

ಟಿಎಂಸಿ ಮುಖಂಡರ ಮೇಲೆ ಮುಗಿಬಿದ್ದ ಪ್ರಕರಣದಲ್ಲಿ ಮಹಿಳೆಯರ ಬಂಧನ
Published 14 ಮೇ 2024, 15:58 IST
Last Updated 14 ಮೇ 2024, 15:58 IST
ಅಕ್ಷರ ಗಾತ್ರ

ಕೋಲ್ಕತ್ತ: ಸ್ಥಳೀಯ ಶಾಸಕ ಹಾಗೂ ಟಿಎಂಸಿ ಮುಖಂಡರ ಮೇಲೆ ಮುಗಿಬಿದ್ದ ಪ್ರಕರಣದಲ್ಲಿ ಭಾನುವಾರ ಬಂಧನವಾದ ನಾಲ್ವರು ಮಹಿಳೆಯರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಂದೇಶ್‌ಖಾಲಿಯಲ್ಲಿ ಸೋಮವಾರದಿಂದ ಆರಂಭವಾಗಿರುವ ಪ್ರತಿಭಟನೆಯು ಮಂಗಳವಾರವೂ ಮುಂದುವರಿಯಿತು. 

ಬಂಧಿತ ಮಹಿಳೆಯರು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪವಿದೆ. ಸ್ಥಳೀಯ ನ್ಯಾಯಾಲಯವು ಸೋಮವಾರ ಈ ನಾಲ್ವರು ಮಹಿಳೆಯರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ನಾಲ್ವರು ಮಹಿಳೆಯರ ಬಂಧನ ವಿರೋಧಿಸಿ ಸೋಮವಾರ ಪ್ರತಿಭಟನೆ ಕೈಗೊಂಡ ಪ್ರತಿಭಟನಕಾರರು, ಸಂದೇಶ್‌ಖಾಲಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿದರು. ಜೊತೆಗೆ ಬಿಜೆಪಿ ಮುಖಂಡರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತೆ ಇರುವ ವಿಡಿಯೊಗಳ ಹಂಚಿಕೆ ಬಗ್ಗೆಯೂ ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯ ಮಹಿಳೆಯರು ದೂರಿದ್ದಾರೆ. 

ಏನಿದು ಪ್ರಕರಣ: ಸಂದೇಶ್‌ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಿರುವ ವಿಡಿಯೊಗಳನ್ನು ಹರಿಬಿಟ್ಟಿದ್ದನ್ನು ವಿರೋಧಿಸಿ ಭಾನುವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಟಿಎಂಸಿ ನಾಯಕರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಟಿಎಂಸಿಯ ಸ್ಥಳೀಯ ಶಾಸಕ ಸುಕುಮಾರ್ ಮಹತಾ ಅವರ ಮೇಲೆ ಪ್ರತಿಭಟನಕಾರರು ಮುಗಿಬಿದ್ದಿದ್ದರು. ಜೊತೆಗೆ ಸ್ಥಳೀಯ ಟಿಎಂಸಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಾಲ್ವರು ಮಹಿಳೆಯರನ್ನು ಬಂಧಿಸಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT