ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಆರೋಪವನ್ನು BJP ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್

Published 5 ಫೆಬ್ರುವರಿ 2024, 10:45 IST
Last Updated 5 ಫೆಬ್ರುವರಿ 2024, 10:45 IST
ಅಕ್ಷರ ಗಾತ್ರ

ರಾಂಚಿ: ತನ್ನ ವಿರುದ್ಧದ ಆರೋಪವನ್ನು ಬಿಜೆಪಿ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸವಾಲೆಸೆದಿದ್ದಾರೆ.

ಇಂದು (ಸೋಮವಾರ) ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಮಂಡಿಸಿದ ವಿಶ್ವಾಸ ಮತ ಯಾಚನೆಯಲ್ಲಿ ಭಾಗವಹಿಸಿ ಮಾತನಾಡಿದ ಹೇಮಂತ್‌ ಸೊರೇನ್‌, ತಮ್ಮ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪಿತೂರಿಯಲ್ಲಿ ರಾಜಭವನ ಕೂಡ ಪ್ರಮುಖ ಪಾತ್ರ ವಹಿಸಿದೆ ಎಂದು ಆರೋಪಿಸಿದರು.

ಕಳೆದ ವಾರ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಹೇಮಂತ್‌ ಸೊರೇನ್‌ ಅವರನ್ನು ಬಂಧಿಸಿತು. ನಂತರ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೇನ್‌ ಅವರು ಫೆಬ್ರುವರಿ 2ರಂದು ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಫೆಬ್ರುವರಿ 5ರಂದು ವಿಶ್ವಾಸ ಮತ ಯಾಚನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಈಗ ಇ.ಡಿ ಬಂಧನದಲ್ಲಿರುವ ಹೇಮಂತ್‌ ಸೊರೇನ್‌ ಅವರಿಗೆ ವಿಶ್ವಾಸ ಮತಯಾಚನೆಯಲ್ಲಿ ಭಾಗವಹಿಸಲು ವಿಶೇಷ ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ನ್ಯಾಯಾಲಯವು ಅನುಮತಿ ನೀಡಿತ್ತು.

ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಂಡ ಹೇಮಂತ್ ಸೊರೇನ್ ಸದನದಲ್ಲಿ ಮಾತನಾಡಿ, ‘ನನ್ನ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತು ಪಡಿಸುವಂತೆ ಬಿಜೆಪಿಗೆ ಸವಾಲು ಹಾಕುತ್ತೇನೆ. ಆರೋಪ ಸಾಬೀತಾದರೆ ರಾಜಕೀಯದಿಂದ ದೂರ ಉಳಿಯುತ್ತೇನೆ’ ಎಂದು ಸವಾಲು ಹಾಕಿದರು.

‘ಜನವರಿ 31 ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ. ರಾಜಭವನದ ಆದೇಶದ ಮೇರೆಗೆ ಮುಖ್ಯಮಂತ್ರಿಯನ್ನು ಬಂಧಿಸಲಾಯಿತು. ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯದ ಸಿಎಂ ಐದು ವರ್ಷಗಳನ್ನು ಪೂರ್ಣಗೊಳಿಸಲು ಬಿಜೆಪಿ ಬಿಡುವುದಿಲ್ಲ’ ಎಂದು ಹೇಮಂತ್‌ ಸೊರೇನ್‌ ಹೇಳಿದರು.

ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ವಿಧಾನಸಭೆಯನ್ನು ತಲುಪಿದಾಗ, ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರು ‘ಹೇಮಂತ್‌ ಸೊರೇನ್‌ ಜಿಂದಾಬಾದ್‌’ ಎಂಬ ಘೋಷಣೆಗಳೊಂದಿಗೆ ಅವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT