ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಂಗಾ ನೀರಿನ ಗುಣಮಟ್ಟದ ಮಾಹಿತಿ ನೀಡಿ’

Last Updated 13 ಮಾರ್ಚ್ 2019, 19:58 IST
ಅಕ್ಷರ ಗಾತ್ರ

ನವದೆಹಲಿ: ಗಂಗಾನದಿಯ ನೀರು ಕುಡಿಯಲು ಮತ್ತು ಸ್ನಾನಕ್ಕೆ ಯೋಗ್ಯವಾಗಿದೆಯೇ ಎನ್ನುವ ಮಾಹಿತಿಯನ್ನು ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಪ್ರತಿ ತಿಂಗಳು ಒದಗಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಉತ್ತರಾಖಂಡ ಮತ್ತು ಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನಿರ್ದೇಶನ ನೀಡಿದೆ.

ಎನ್‌ಜಿಟಿ ಅಧ್ಯಕ್ಷರಾದ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯೆಲ್‌ ಅವರ ನೇತೃತ್ವದ ಪೀಠವು, ನದಿ ನೀರಿನ ಶುಚಿತ್ವ ಕಾಪಾಡಲು ವಿಫಲವಾಗಿರುವುದಕ್ಕೆ ಎರಡೂ ರಾಜ್ಯಗಳಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಕಾನ್ಪುರದಿಂದ ಬಕ್ಸಾರ್‌ (2ನೇ ಹಂತ), ಬಕ್ಸಾರ್‌ನಿಂದ ಗಂಗಾ ಸಾಗರದವರೆಗಿನ (3ನೇ ಹಂತ) ಸ್ವಚ್ಛತೆಗೆ ಸಂಬಂಧಿಸಿದಂತೆ ಬಿಹಾರ, ಜಾರ್ಖಂಡ್‌, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಪರ್ಕ ಮಾಹಿತಿಯನ್ನು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ (ಎನ್‌ಎಂಸಿಜಿ) ತನ್ನ ಅಫಿಡವಿಟ್‌ನಲ್ಲಿ ಒದಗಿಸಿಲ್ಲ ಎಂದು ನ್ಯಾಯಮಂಡಳಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಎನ್ಎಂಸಿಜಿ ಸಲ್ಲಿಸಿರುವ ಅಫಿಡವಿಟ್ ಕೆಟ್ಟ ಚಿತ್ರಣ ಒದಗಿಸುತ್ತದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

ಎನ್‌ಎಂಸಿಜಿಗೆ ಕೊನೆಯ ಒಂದು ಅವಕಾಶ ಮಾತ್ರ ನೀಡಲಾಗುವುದು. 2 ಮತ್ತು 3ನೇ ಹಂತಕ್ಕೆ ರೂಪಿಸಿರುವ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಏಳು ದಿನಗಳೊಳಗೆ ಮಾಹಿತಿ ಸಲ್ಲಿಸಬೇಕು. ಅಲ್ಲದೆ, ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಸ್ಥಾಪನೆ, ಒತ್ತುವರಿ ತಡೆ ಸಂಬಂಧ ಕ್ರಿಯಾ ಯೋಜನೆಯನ್ನು ಏಪ್ರಿಲ್‌ 30ರೊಳಗೆ ಸಲ್ಲಿಸಬೇಕು ಎಂದು ನ್ಯಾಯಮಂಡಳಿ ಹೇಳಿದೆ.

ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ.

ಪೀಠ ಹೇಳಿದ್ದೇನು: ಅಲಹಾಬಾದ್‌ನಲ್ಲಿ ಕುಂಭಮೇಳದ ನಂತರ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿದೆಯೆ ಎನ್ನುವುದನ್ನು ಉತ್ತರಪ್ರದೇಶ ಸರ್ಕಾರ ನ್ಯಾಯಮೂರ್ತಿ ಅರುಣ್‌ ಟಂಡನ್‌ ನೇತೃತ್ವದ ಸಮಿತಿಯಿಂದ ಖಾತ್ರಿಪಡಿಸಬೇಕು.

ಗಂಗಾ ನದಿಯ ನೀರು ಸ್ನಾನ ಮತ್ತು ಕುಡಿಯಲು ಯೋಗ್ಯವಾಗಿದೆಯೇ ಎನ್ನುವ ಮಾಹಿತಿಯನ್ನು ದೊಡ್ಡ ಫಲಕದಲ್ಲಿ ನದಿ ಉದ್ದಕ್ಕೂ 100 ಕಿ.ಮೀ ಅಂತರದಲ್ಲಿ ಅಳವಡಿಸಬೇಕು ಎಂದು ನ್ಯಾಯಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT