ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಣೆ ಪೋಶೆ ಕಾರು ಅಪಘಾತ | ಪೊಲೀಸರ ವಿರುದ್ಧ ಕ್ರಮ ಅನಗತ್ಯ: ಫಡಣವೀಸ್‌

Published 28 ಜೂನ್ 2024, 16:33 IST
Last Updated 28 ಜೂನ್ 2024, 16:33 IST
ಅಕ್ಷರ ಗಾತ್ರ

ಮುಂಬೈ: ‘ಪುಣೆಯ ಬಹುಚರ್ಚಿತ ಪೋಶೆ ಕಾರು ಅಪಘಾತ ಪ್ರಕರಣದ ತನಿಖೆಯಲ್ಲಿ ಪುಣೆ ನಗರ ಪೊಲೀಸ್‌ ಕಮಿಷನರ್ ಅಮೃತೇಶ್‌ ಕುಮಾರ್ ಅವರು ಸಕ್ರಿಯ ಪಾತ್ರ ನಿಭಾಯಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದಕ್ಕೆ ಯಾವುದೇ ಸಮರ್ಥನೆಗಳಿಲ್ಲ’ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದರು. 

ಗಮನಸೆಳೆಯುವ ಸೂಚನೆ ಮೂಲಕ ಪ್ರಸ್ತಾಪವಾದ ಈ ವಿಷಯ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಅವರು ಈ ಮಾತು ಹೇಳಿದರು. ವಿರೋಧ ಪಕ್ಷದ ನಾಯಕ ವಿಜಯ್‌ ವಾಡೆಟ್ಟಿವಾರ್ ಅವರು, ಪೊಲೀಸ್ ಕಮಿಷನರ್‌ ರಾಜೀನಾಮೆಗೆ ಆಗ್ರಹಪಡಿಸಿದ್ದರು. 

‘ನ್ಯಾಯ ಖರೀದಿಸಲು ಹಣ ಬಳಕೆಯಾಗಿದೆ’ ಎಂಬ ವಿಷಯ ಕುರಿತು ಫಡಣವೀಸ್‌ ಅವರು, ಇಂತಹದ್ದಕ್ಕೆ ಅವಕಾಶ ಇರಬಾರದು. ಇದನ್ನು ತಡೆಯಲು ಕಾಯ್ದೆಯನ್ನು ಬಲಪಡಿಸಬೇಕು. ಇದು, ಗಂಭೀರವಾದ ವಿಷಯ. ಹಾಗೆಂದು, ಪುಣೆ ಪೊಲೀಸರ ಬಗ್ಗೆ ನೈತಿಕತೆ ಕುಗ್ಗಿಸುವ ಅಗತ್ಯವಿಲ್ಲ. ಅವರು ಕ್ರಮಕೈಗೊಂಡಿದ್ದಾರೆ, ತಪ್ಪಿತಸ್ಥ ಪೊಲೀಸರಿದ್ದರೆ ಕ್ರಮಜ ರುಗಿಸಬೇಕು’ ಎಂದು ಹೇಳಿದರು.

ಇದೇ ಪ್ರಕರಣದಲ್ಲಿ ಸಾಸೂನ್‌ ಆಸ್ಪತ್ರೆಯ ಇಬ್ಬರು ವೈದ್ಯರು ₹3 ಲಕ್ಷ ಹಣವನ್ನು ಲಂಚವಾಗಿ ಪಡೆದು ರಕ್ತದ ಮಾದರಿಯನ್ನು ಬದಲಿಸಿದ್ದರು ಎಂದು ಫಡಣವೀಸ್ ಅವರು ಹೇಳಿದರು.

‘ಪ್ರತಿಯೊಂದು ಪ್ರಕರಣದಿಂದಲೂ ನಮಗೆ ವ್ಯವಸ್ಥೆಯಲ್ಲಿನ ಕೆಲ ಲೋಪಗಳು ಅರಿವಾಗುತ್ತವೆ. ಜುಲೈ 1ರಿಂದ ಜಾರಿಯಾಗುವ ಹೊಸ ಕ್ರಿಮಿನಲ್ ಕಾಯ್ದೆಗಳು ನ್ಯಾಯಾಂಗ, ಪ್ರಯೋಗಾಲಯ, ತಾಂತ್ರಿಕ ಸಾಕ್ಷ್ಯ ಕುರಿತು ಹೆಚ್ಚಿನ ಒತ್ತು ನೀಡಲಿವೆ’ ಎಂದು ಹೇಳಿದರು.

ಮೇ 19ರಂದು ನಡೆದಿದ್ದ ಪೋಶೆ ಕಾರು ಅಪಘಾತದಲ್ಲಿ ಇಬ್ಬರು ಸಾಫ್ಟ್‌ವೇರ್ ವೃತ್ತಿಪರರು ಮೃತಪಟ್ಟಿದ್ದರು. ಪೊಲೀಸರ ಪ್ರಕಾರ, 17 ವರ್ಷದ ಬಾಲಕ ಕಾರು ಓಡಿಸುತ್ತಿದ್ದು, ಆತನನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಹೈಕೋರ್ಟ್ ಆದೇಶದ ಅನುಸಾರ ಬಾಲಕನನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT