ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು: ರಾಹುಲ್ ಗಾಂಧಿ ಗುಡುಗು

Published 9 ಆಗಸ್ಟ್ 2023, 11:38 IST
Last Updated 9 ಆಗಸ್ಟ್ 2023, 11:38 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಗರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಮಣಿಪುರ ಹಿಂಸಾಚಾರ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಅವರು, ಇಂದು ಇಡೀ ದೇಶದ ಮೇಲೆ ಬಿಜೆಪಿಯವರು ಸೀಮೆಎಣ್ಣೆ ಎರಚಿದ್ದಾರೆ. ಮೊದಲು ಮಣಿಪುರದ ಮೇಲೆ ಎರಚಿದರು, ಬೆಂಕಿ ಹಚ್ಚಿದರು. ನಂತರ ಹರಿಯಾಣದ ಮೇಲೆ ಚಿಮುಕಿಸಿದರು, ಅದೂ ಉರಿಯುತ್ತಿದೆ. ಇದೀಗ ಇಡೀ ದೇಶವನ್ನು ಸುಡುವಲ್ಲಿ ನಿರತರಾಗಿದ್ದಾರೆ. ಅವರು (ಬಿಜೆಪಿಗರು) ಭಾರತ ಮಾತೆಯ ರಕ್ಷಕರಲ್ಲ, ಹಂತಕರು’ ಎಂದು ಕಿಡಿಕಾರಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರಿ ಜಟಾಪಟಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.

ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ಮಂಗಳವಾರದಿಂದ ಚರ್ಚೆ ಆರಂಭವಾಗಿದ್ದು, ಮಣಿಪುರ ಹಿಂಸಾಚಾರ ವಿಷಯಕ್ಕೆ ಸಂಬಂಧಿಸಿ ಕಾವೇರಿದೆ.

ಇಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದಿರುವುದನ್ನು ಟೀಕಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ನಾನು ಮಣಿಪುರಕ್ಕೆ ಭೇಟಿ ನೀಡಿದ್ದೇನೆ. ಆದರೆ, ಪ್ರಧಾನಿ ಮೋದಿ ಇದುವರೆಗೆ ಅಲ್ಲಿಗೆ ಹೋಗಿಲ್ಲ. ಅವರು ಮಣಿಪುರವನ್ನು ದೇಶದ ಭಾಗವೆಂದು ಪರಿಗಣಿಸಿಲ್ಲ. ನಾನು ಮಣಿಪುರ ಎಂಬ ಪದವನ್ನು ಬಳಕೆ ಮಾಡಿದ್ದೇನೆ. ಆದರೆ ನಿಜಾಂಶವೆಂದರೆ ಮಣಿಪುರ ಅಸ್ತಿತ್ವದಲ್ಲಿಲ್ಲ. ಬಿಜೆಪಿ ಸರ್ಕಾರ ಮಣಿಪುರವನ್ನು ಇಬ್ಭಾಗ ಮಾಡಿದೆ. ಮಣಿಪುರವನ್ನು ಒಡೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಮಣಿಪುರದಲ್ಲಿ ಹಿಂದೂಸ್ತಾನದ ಕೊಲೆಯಾಗಿದೆ. ಅವರ ರಾಜಕೀಯ ಮಣಿಪುರವನ್ನು ಮಾತ್ರವಲ್ಲ ಹಿಂದೂಸ್ತಾನವನ್ನು ಕೊಲೆ ಮಾಡಲಾಗಿದೆ. ಮಣಿಪುರದಲ್ಲಿ ಜನರನ್ನು ಕೊಂದಿರುವ ನೀವು ಭಾರತ ಮಾತೆಯನ್ನೂ ಕೊಂದಿದ್ದೀರಿ. ನೀವು ದೇಶಭಕ್ತರಲ್ಲ, ದೇಶದ್ರೋಹಿಗಳು ಎಂದು ಬಿಜೆಪಿಗರು ವಿರುದ್ಧ ಟೀಕಿಸಿದ್ದಾರೆ.

ರಾಹುಲ್ ಹೇಳಿಕೆಗೆ ಸ್ಮೃತಿ ಇರಾನಿ ಆಕ್ರೋಶ

ಮಣಿಪುರದಲ್ಲಿ ಬಿಜೆಪಿಯ ರಾಜಕೀಯ ‘ಭಾರತವನ್ನು ಕೊಲೆ ಮಾಡಿದೆ’ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲು ಎಂದಿದ್ದಾರೆ.

ಏನಿದು ವಿವಾದ?
ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲುಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಮತ್ತು ಒಬ್ಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯಕ್ಕೆ ದೇಶದಾದ್ಯಂತ ಆಘಾತ ಮತ್ತು ಆಕ್ರೋಶ ವ್ಯಕ್ತವಾಗಿದೆ. ಮೇ 4ರಂದು ನಡೆದಿದ್ದ ಹೇಯ ಕೃತ್ಯದ ವಿಡಿಯೊ ಜುಲೈ 19ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಮತ್ತು ಮಣಿಪುರ ಸರ್ಕಾರವನ್ನು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT