ಪಣಜಿ (ಗೋವಾ): ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮಹಿಳೆಗೆ ಚಾಕುವಿನಿಂದ ಅನೇಕ ಬಾರಿ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ಪೊರ್ವೊರಿಮ್‌ನಲ್ಲಿ ಇಂದು (ಶನಿವಾರ) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಪೊರ್ವೊರಿಮ್ ನಿವಾಸಿ ಪ್ರಕಾಶ್ ಚುಂಚೋಡ್ (22) ಹಾಗೂ ಸಂತ್ರಸ್ತೆಯನ್ನು ಕಾಮಾಕ್ಷಿ ಶಂಕರ್ ಎಂದು ಗುರುತಿಸಲಾಗಿದೆ.
ಕಾಮಾಕ್ಷಿ (30) ಅವರು ವಾಸವಿದ್ದ ಫ್ಲ್ಯಾಟ್‌ಗೆ ಆಗಮಿಸಿದ ಆರೋಪಿ, ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ, ಸಂತ್ರಸ್ತೆಯು ಇದಕ್ಕೆ ಒಪ್ಪಲಿಲ್ಲ. ಇದರಿಂದ ವಿಚಲಿತನಾದ ಆರೋಪಿ, ಜಗಳ ಮಾಡಿ, ಚಾಕುವಿನಿಂದ ಇರಿದಿದ್ದಾನೆ.
ಹತ್ಯೆಯ ಬಳಿಕ ಆರೋಪಿಯು ತನ್ನ ಸ್ನೇಹಿತ ನಿರುಪಡಿ ಶರಣಪ್ಪ(21) ಎಂಬಾತನ ಜೊತೆಗೂಡಿ ಶವವನ್ನು ಫ್ಲಾಟ್‌ನಿಂದ 80 ಕಿ.ಮೀ ದೂರವಿರುವ ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ಎಸೆದು ಬಂದಿದ್ದಾನೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಶವ ಸಾಗಿಸಿದ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.