ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೈವಾರ್ಷಿಕ ಹಣಕಾಸು ನೀತಿ ಪರಾಮರ್ಶೆ: ಬಡ್ಡಿ ದರ ಏರಿಕೆ ಸಾಧ್ಯತೆ ಇಲ್ಲ

Published 1 ಅಕ್ಟೋಬರ್ 2023, 15:44 IST
Last Updated 1 ಅಕ್ಟೋಬರ್ 2023, 15:44 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ದ್ವೈವಾರ್ಷಿಕ ಹಣಕಾಸು ನೀತಿ ಪರಾಮರ್ಶೆಯು ಈ ವಾರದಲ್ಲಿ ನಡೆಯಲಿದ್ದು ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಹಣದುಬ್ಬರ ದರವು ಹೆಚ್ಚಾಗಿಯೇ ಇರುವುದು ಮತ್ತು ಜಾಗತಿಕ ವಿದ್ಯಮಾನಗಳ ಆಧಾರದಲ್ಲಿ ಆರ್‌ಬಿಐ ಈ ನಿರ್ಧಾರಕ್ಕೆ ಬರಬಹುದು ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ, ಚಿಲ್ಲರೆ ಮತ್ತು ಕಾರ್ಪೊರೇಟ್‌ ಸಾಲದ ಬಡ್ಡಿದರವು ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು. 

ರಷ್ಯಾ–ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ, 2022ರ ಮೇಯಲ್ಲಿ ಬಡ್ಡಿದರವನ್ನು ಏರಿಸಲು ಆರ್‌ಬಿಐ ಆರಂಭಿಸಿತ್ತು. ಈ ಫೆಬ್ರುವರಿಯಲ್ಲಿ ಅದು ಶೇ 6.5ರಷ್ಟಕ್ಕೆ ತಲುಪಿದೆ. ನಂತರದ ಸತತ ಮೂರು ದ್ವೈವಾರ್ಷಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿಯೂ ಬಡ್ಡಿದರವನ್ನು ಹೆಚ್ಚಿಸಲಾಗಿಲ್ಲ. 

ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಇದೇ ನಾಲ್ಕರಿಂದ (ಬುಧವಾರ) ಮೂರು ದಿನಗಳ ಸಭೆ ನಡೆಸಲಿದೆ. ಶಕ್ತಿಕಾಂತ್‌ ಅವರು ಆರರಂದು (ಶುಕ್ರವಾರ) ಸಮಿತಿಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. 

ಸಾಲ ನೀತಿ ಮತ್ತು ಬಡ್ಡಿದರವನ್ನು ಈಗಿರುವ ರೀತಿಯಲ್ಲಿಯೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಣದುಬ್ಬರವು ಶೇ 6.8ರಷ್ಟರಲ್ಲಿಯೇ ಇದೆ. ಆದರೆ ಅಕ್ಟೋಬರ್‌ನಲ್ಲಿ ಇದು ಕೆಳಕ್ಕೆ ಇಳಿಯಬಹುದು. ಮುಂಗಾರು ಬೆಳೆಯ ಕುರಿತು ಅನಿಶ್ಚಿತತೆ ಮೂಡಿರುವುದರಿಂದ ಧಾನ್ಯದ ದರ ಏರಿಕೆಯಾಗಿ ಹಣದುಬ್ಬರವೂ ಏರಬಹುದು ಎಂದು ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್‌ ಸಬ್ನಿವಿಸ್‌ ಹೇಳಿದ್ದಾರೆ. 

ಹಣದುಬ್ಬರವು ಕುಸಿತದ ಹಾದಿಯಲ್ಲಿ ಇರುವುದರಿಂದ ಬಡ್ಡಿದರ ಏರಿಕೆಯ ಸಾಧ್ಯತೆ ಇಲ್ಲ. ಆದರೆ, ಹಣಕಾಸು ನೀತಿ ಸಮಿತಿಯು ಬಡ್ಡಿದರವನ್ನು ಇಳಿಸಲು ಇನ್ನಷ್ಟು ಕಾಲ ಕಾಯಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT