ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಶೇ 50 ತೆರಿಗೆ ಪಾಲನ್ನು ವಾಪಸ್ ಮಾಡಿ: ಕೇಂದ್ರಕ್ಕೆ ಉದ್ಧವ್ ಆಗ್ರಹ

Published 12 ಫೆಬ್ರುವರಿ 2024, 5:33 IST
Last Updated 12 ಫೆಬ್ರುವರಿ 2024, 5:33 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಿಂದ ಸಂಗ್ರಹವಾದ ತೆರಿಗೆಯಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರ ವಾಪಸ್‌ ಮಾಡಬೇಕು ಎಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.

ಮುಂಬೈನಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಠಾಕ್ರೆ, ದಕ್ಷಿಣದ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಇದೇ ರೀತಿಯ ಬೇಡಿಕೆಯೊಂದಿಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದನ್ನು ಉಲ್ಲೇಖಿಸಿದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಠಾಕ್ರೆ, ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹ 1 ಅನ್ನು ಪಾವತಿಸಿದರೆ, ಕೇವಲ 7 ಪೈಸೆಯಷ್ಟೇ ವಾಪಸ್‌ ಬರುತ್ತಿದೆ. 'ಉಳಿದ ಹಣ ಏನಾಗುತ್ತಿದೆ? ಯಾವ ಉಚಿತ ಯೋಜನೆಗಳನ್ನು ನೀಡಿದ್ದೀರಿ' ಎಂದು ಪ್ರಶ್ನಿಸಿದ್ದಾರೆ.

'ಮಹಾರಾಷ್ಟ್ರ ₹ 1 ಅನ್ನು ನೀಡುತ್ತಿದೆ ಎಂದರೆ, ರಾಜ್ಯದ ಅಭಿವೃದ್ಧಿಗಾಗಿ ಅದರಲ್ಲಿ ಅರ್ಧದಷ್ಟನ್ನು ವಾಪಸ್‌ ಮಾಡಿ. ನೀವು (ಕೇಂದ್ರ ಸರ್ಕಾರ) ನಮ್ಮ ರಾಜ್ಯವನ್ನು ಲೂಟಿ ಮಾಡುತ್ತಿದ್ದೀರಿ. ನಾವು (ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ) ಅಧಿಕಾರಕ್ಕೇರಿದರೆ, ಮಹಾರಾಷ್ಟ್ರದ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಿನ ತೆರಿಗೆ ಹಂಚಿಕೆ ಸೂತ್ರವನ್ನು ಬದಲಿಸುವ ಭರವಸೆ ನೀಡುತ್ತೇನೆ' ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ 'ಮೋದಿ ಗ್ಯಾರಂಟಿ' ಘೋಷಣೆ ವಿರುದ್ಧವೂ ಹರಿಹಾಯ್ದಿರುವ ಠಾಕ್ರೆ, ಇಂತಹ ಘೋಷಣೆಗಳು ಮಹಾರಾಷ್ಟ್ರದಂತಹ ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆಗಳನ್ನು ಅವಲಂಬಿಸಿದೆ ಎಂದು ಕುಟುಕಿದ್ದಾರೆ.

ಕೇಂದ್ರ ಸರ್ಕಾರ ಅನುದಾನ ಹಂಚಿಕೆ ತಾರತಮ್ಯವನ್ನು ವಿರೋಧಿಸಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ದೆಹಲಿಯ ಜಂತರ್‌ ಮಂತರ್‌ನಲ್ಲಿ ಫೆಬ್ರುವರಿ 7ರಂದು ಪ್ರತಿಭಟನೆ ನಡೆಸಿದ್ದರು. ಮರುದಿನ ಕೇರಳ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ಎಲ್‌ಡಿಎಫ್‌ ಶಾಸಕರು ಪ್ರತಿಭಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT