ನವದೆಹಲಿ: ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನ (ಆರ್‌ಜಿಕೆಎಂಸಿಎಚ್) ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಹಾಗೂ ಇತರ ನಾಲ್ವರು ವೈದ್ಯರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದ್ದಾರೆ.
ಸಿಬಿಐ ಅಧಿಕಾರಿಗಳು ಘೋಷ್ ಹಾಗೂ ಹಾಗೂ ಘಟನೆ ನಡೆದ ದಿನ (ಆಗಸ್ಟ್ 9) ಕರ್ತವ್ಯದಲ್ಲಿದ್ದ ನಾಲ್ವರು ವೈದ್ಯರನ್ನು ಗುರುವಾರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಅನುಮತಿ ಕೋರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನ್ಯಾಯಾಲಯ ಮತ್ತು ಆರೋಪಿಗಳ ಅನುಮತಿಯಿದ್ದರೆ ಮಾತ್ರ ಸುಳ್ಳು ಪತ್ತೆ ಪರೀಕ್ಷೆ ನಡೆಸಬಹುದು ಎಂದು ಅವರು ಹೇಳಿದರು.
ಮೂವರು ಅಧಿಕಾರಿಗಳು ವರ್ಗಾವಣೆ: ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರ ಬೇಡಿಕೆಗೆ ಮಣಿದಿರುವ ಪಶ್ಚಿಮ ಬಂಗಾಳ ಸರ್ಕಾರ, ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಅದೇ ರೀತಿ ಕಾಲೇಜಿನ ಮಾಜಿ ಪ್ರಾಂಶುಪಾಲ ಘೋಷ್ ಅವರನ್ನು ಕಲ್ಕತ್ತ ನ್ಯಾಷನಲ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರ ಹುದ್ದೆಯಿಂದಲೂ ವಜಾಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಎನ್.ಎಸ್.ನಿಗಮ್ ಗುರುವಾರ ಹೇಳಿದ್ದಾರೆ. ಆರ್.ಜಿ ಕರ್ ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದ ಘೋಷ್ ಅವರನ್ನು ಕಲ್ಕತ್ತ ನ್ಯಾಷನಲ್ ಕಾಲೇಜಿಗೆ ವರ್ಗಾವಣೆ ಮಾಡಲಾಗಿತ್ತು.
ಪ್ರೊ. ಬುಲ್‌ಬುಲ್ ಮುಖೋಪಾಧ್ಯಾಯ್ (ವೈದ್ಯಕೀಯ ಅಧೀಕ್ಷಕ ಮತ್ತು ಉಪ ಪ್ರಾಂಶುಪಾಲ) ಮತ್ತು ಅರುಣವ್ ದತ್ತಾ (ಚೆಸ್ಟ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು) ಅವರನ್ನೂ ವರ್ಗಾವಣೆ ಮಾಡಲಾಗಿದೆ.
ಮಾನಸ್ ಕುಮಾರ್ ಬಂದೋಪಾಧ್ಯಾಯ್ ಅವರನ್ನು ಆರ್‌ಜಿಕೆಎಂಸಿಎಚ್‌ನ ನೂತನ ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಸುಹರಿತಾ ಪಾಲ್ ಅವರು ಬಾರಾಸಾತ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರ ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.