ನವದೆಹಲಿ: ಆರ್ಜೆಡಿಗೆ ಯಾದವ–ಮುಸ್ಲಿಂ (ಎಂ–ವೈ) ಮತಗಳೇ ಪ್ರಮುಖ ಆಸರೆ. ಶೇ 17ರಷ್ಟಿರುವ ಮುಸ್ಲಿಂ ಹಾಗೂ ಶೇ 13ರಷ್ಟಿರುವ ಯಾದವರು ಆರ್ಜೆಡಿಯ ಪಾರಂಪರಿಕ ಮತದಾರರು. ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೂ ಅವರೇ ಮತ ಬ್ಯಾಂಕ್. ಮಹಾಮೈತ್ರಿಕೂಟವು ಕಳೆದ ಬಾರಿ ಗಳಿಸಿದಷ್ಟೇ ಮತಗಳನ್ನು ಪಡೆದಿದೆ. ಆದರೆ, ಸೀಟುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇನ್ನೊಂದೆಡೆ, ಎನ್ಡಿಎ ಮೈತ್ರಿಕೂಟದ ಮತ ಪ್ರಮಾಣವು ಕಳೆದ ಸಲಕ್ಕಿಂತ ಶೇ 10ರಷ್ಟು ಜಾಸ್ತಿ ಆಗಿದೆ. ಯಾದವೇತರ ಪ್ರಬಲ ಜಾತಿಗಳು, ಅತಿ ಹಿಂದುಳಿದ ಜಾತಿಗಳು (ಇಬಿಸಿ) ಹಾಗೂ ದಲಿತರ ಮತ ಸಮೀಕರಣದಿಂದ ಮೈತ್ರಿಕೂಟ ಅಭೂತಪೂರ್ವ ಜಯ ಪಡೆದಿದೆ. ರಾಜ್ಯದಲ್ಲಿ ಶೇ 36ರಷ್ಟಿರುವ ಇಬಿಸಿ ಮತದಾರರು ದಶಕಗಳಿಂದ ನಿತೀಶ್ ತೆಕ್ಕೆಯಲ್ಲಿದ್ದಾರೆ. 2020ರಲ್ಲಿ ಜೆಡಿಯು ಮತಗಳನ್ನು ಗಣನೀಯ ಪ್ರಮಾಣದಲ್ಲಿ ಕಸಿದು ಪಕ್ಷವನ್ನು 43 ಸ್ಥಾನಕ್ಕೆ ಇಳಿಸಿದ್ದ ಚಿರಾಗ್ ಪಾಸ್ವಾನ್ ಮೈತ್ರಿಕೂಟಕ್ಕೆ ಬಂದಿದ್ದು ಇಡೀ ಸಮೀಕರಣವನ್ನೇ ಬದಲಿಸಿತು. ಕಳೆದ ಬಾರಿ ಮೂರು ಸ್ಥಾನಗಳನ್ನು ಗೆದ್ದಿದ್ದ ಎಲ್ಜೆಪಿ ಈ ಬಾರಿ 19 ಸ್ಥಾನಗಳನ್ನು ಗೆದ್ದು ಬೀಗಿತು. ಮಿತ್ರ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಗಣನೀಯ ಕೊಡುಗೆ ನೀಡಿತು. ಉಪೇಂದ್ರ ಕುಶ್ವಾಹ ಅವರು ಕುಶ್ವಾಹ ಮತಗಳನ್ನು ಹಾಗೂ ಪಾಸ್ವಾನ್ ಮತ್ತು ಜಿತನ್ ರಾಮ್ ಮಾಂಜಿ ಅವರು ದಲಿತ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಮೈತ್ರಿಕೂಟಕ್ಕೆ ಸೆಳೆದರು. ಫಲವಾಗಿ ಗ್ರಾಮೀಣ ಬಿಹಾರದಲ್ಲಿ ಬಹುತೇಕ ಕ್ಷೇತ್ರಗಳನ್ನು ಗೆದ್ದಿತು. ಯಾದವ–ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿತು.

2020ರ ಚುನಾವಣೆಯಲ್ಲಿ ಯುವ ಜನರ ಕಣ್ಮಣಿ ಆಗಿದ್ದ ತೇಜಸ್ವಿ ಯಾದವ್ ಅವರು ಈ ಚುನಾವಣೆಯಲ್ಲಿ ಗೆದ್ದದ್ದೇ ಏದುಸಿರು ಬಿಟ್ಟು. ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ, ಪುಕ್ಕಟೆ ವಿದ್ಯುತ್ನಂತಹ ಅವರ ಗ್ಯಾರಂಟಿಗಳು ಮನ ಗೆಲ್ಲುವಲ್ಲಿ ವಿಫಲವಾದವು. ಈಗಿರುವ ಸರ್ಕಾರವೇ ಮನ ಖುಷಿ ಪಡುವಷ್ಟು ಗ್ಯಾರಂಟಿಗಳನ್ನು ನೀಡಿರುವಾಗ ತೇಜಸ್ವಿ ಅವರ ಘೋಷಣೆಗಳು ಮತದಾರರಿಗೆ ಆಕರ್ಷಕವಾಗಿ ಕಾಣಲಿಲ್ಲ. 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆರ್ಜೆಡಿಯು 69 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತು. ಇದು ಸಹ ಜಾತಿ ಸಮೀಕರಣಕ್ಕೆ ಹೊಡೆತ ನೀಡಿತು.

ಸೀಟು ಹಂಚಿಕೆ, ಅಭ್ಯರ್ಥಿಗಳ ಆಯ್ಕೆಯನ್ನು ಸಲೀಸಾಗಿ ಮುಗಿಸಿದ್ದ ಎನ್ಡಿಎ ಮೈತ್ರಿಕೂಟವು ಚುನಾವಣೆಗೆ ಮುನ್ನವೇ ಅರ್ಧ ಗೆದ್ದಾಗಿತ್ತು. ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದ ವರೆಗೂ ಸೀಟು ಹಂಚಿಕೆ ಅಂತಿಮಗೊಳಿಸದೆ ಪರಸ್ಪರ ಕಚ್ಚಾಡುತ್ತಲೇ ಇದ್ದ ಮಹಾಮೈತ್ರಿಕೂಟದ ಭವಿಷ್ಯ ಆಗಲೇ ನಿರ್ಧಾರವಾಗಿತ್ತು. ಫ್ರೆಂಡ್ಲಿ ಫೈಟ್ ಹೆಸರಿನಲ್ಲಿ ವಿಪಕ್ಷ ಕೂಟವು ಮತ್ತಷ್ಟು ಗೊಂದಲ ಸೃಷ್ಟಿಸಿ ಎನ್ಡಿಎ ಮೈತ್ರಿಕೂಟದ ಗೆಲುವನ್ನು ಸರಾಗಗೊಳಿಸಿತು. 2020ರಲ್ಲಿ ಕಳಪೆ ಸಾಧನೆ ಮಾಡಿದ ಮೈತ್ರಿಕೂಟವನ್ನು ಅಧಿಕಾರ ವಂಚಿತರನ್ನಾಗಿ ಮಾಡಿದ್ದ ಕಾಂಗ್ರೆಸ್ ಈ ಸಲ ಪಾತಾಳಕ್ಕೆ ಕುಸಿಯಿತು.

37 ಹರೆಯದ ತೇಜಸ್ವಿಗೆ ಸರಿಸಾಟಿಯಾಗಿ 75ರ ಹರೆಯದ ನಿತೀಶ್ 84 ರ್ಯಾಲಿಗಳಲ್ಲಿ ಭಾಗವಹಿಸಿ ತಮ್ಮ ಮತ ಬ್ಯಾಂಕ್ ಅನ್ನು ಮತ್ತಷ್ಟು ಭದ್ರಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂತಾದ
ನಾಯಕರು ಪ್ರಚಾರ ಕಣದಲ್ಲಿ ದೂಳೆಬ್ಬಿಸಿದರು. ಇದಕ್ಕೆ ಹೋಲಿಸಿದರೆ, ಚುನಾವಣೆಗೆ ಒಂದು ವಾರ ಇರುವಾಗ ರಾಹುಲ್ ಅವರು ಬಿಹಾರದ ಪ್ರಚಾರ ಕಣಕ್ಕೆ ಧುಮುಕಿದರು. ಜೋಡೆತ್ತಿನಂತೆ ಸಾಗಬೇಕಿತ್ತ ರಾಹುಲ್–ತೇಜಸ್ವಿ ಅಂತರ ಕಾಯ್ದುಕೊಂಡು ತಮ್ಮ ನಡುವಿನ ಭಿನ್ನಮತವನ್ನು ಬಹಿರಂಗಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.