ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಎಸ್‌ಎಸ್‌ – ಸಂವಿಧಾನ ವಿರೋಧಿ: ಮಲ್ಲಿಕಾರ್ಜುನ ಖರ್ಗೆ

Published 3 ಜುಲೈ 2024, 19:07 IST
Last Updated 3 ಜುಲೈ 2024, 19:07 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಸೈದ್ಧಾಂತಿಕ ಮಾರ್ಗದರ್ಶಕ ಆಗಿರುವ ಆರ್‌ಎಸ್‌ಎಸ್‌ ಸಂವಿಧಾನ ವಿರೋಧಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಸೇರಿದಂತೆ ಇತರ ವಿಷಯಗಳಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮೋದಿ ಅವರು ಉತ್ತರ ನೀಡುತ್ತಿದ್ದಾಗ, ಮಧ್ಯದಲ್ಲಿ ಮಾತನಾಡಲು ಅವಕಾಶ ದೊರೆಯದ್ದರಿಂದ ಬೇಸತ್ತ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಸದನದಿಂದ ಹೊರನಡೆದರು. ಬಳಿಕ ಅವರು ಹಳೆ ಸಂಸತ್‌ ಭವನದ (ಸಂವಿಧಾನ ಸದನ) ಪ್ರವೇಶದ್ವಾರದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಖರ್ಗೆ ಅವರಲ್ಲದೆ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ಪಿ.ಚಿದಂಬರಂ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್, ಡಿಎಂಕೆಯ ತಿರುಚಿ ಶಿವ, ಸಾಗರಿಕಾ ಘೋಷ್ ಮತ್ತು ಸುಶ್ಮಿತಾ ದೇವ್‌ (ಟಿಎಂಸಿ), ಮಹುವಾ ಮಜಿ (ಜೆಎಂಎಂ), ಮನೋಜ್‌ ಝಾ (ಆರ್‌ಜೆಡಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನಾ–ಯುಬಿಟಿ) ಸೇರಿದಂತೆ ಹಲವರು ಅಲ್ಲಿ ಸೇರಿದ್ದರು.

‘ಪ್ರಧಾನಿ ಅವರು ತಪ್ಪು ಮಾಹಿತಿ ನೀಡಿದ ಕಾರಣ ನಾವು, ಸದನದಿಂದ ಹೊರ ನಡೆದೆವು. ಸುಳ್ಳು ಹೇಳುವುದು, ಜನರನ್ನು ದಾರಿ ತಪ್ಪಿಸುವುದು ಮತ್ತು ಸತ್ಯವನ್ನು ಮರೆ ಮಾಚುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ’ ಎಂದು ಖರ್ಗೆ ಹೇಳಿದರು.

‘ಪ್ರಧಾನಿಯವರು ಸಂವಿಧಾನದ ಬಗ್ಗೆ ಮಾತನಾಡುವಾಗ... ನೀವು ಸಂವಿಧಾನವನ್ನು ಬರೆದಿಲ್ಲ, ನೀವು ಅದರ ವಿರೋಧಿಗಳಾಗಿದ್ದಿರಿ ಎಂದು ಹೇಳಲು ನಾನು ಬಯಸಿದ್ದೆ. ಸಂವಿಧಾನದ ಪರ ಯಾರು ಮತ್ತು ವಿರುದ್ಧ ಯಾರು ಇದ್ದರು ಎಂಬುದನ್ನು ಸ್ಪಷ್ಟಪಡಿಸಲು ಬಯಸಿದ್ದೆ. ಆದರೆ ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಲಿಲ್ಲ’ ಎಂದು ಅವರು ಹೇಳಿದರು.

ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್’ನಲ್ಲಿ 1950ರ ನವೆಂಬರ್‌ 30ರಂದು ಪ್ರಕಟವಾದ ಲೇಖನವನ್ನು ಉಲ್ಲೇಖಿಸಿದ ಅವರು, ಈ ಸಂಘಟನೆಯು ಸಂವಿಧಾನವನ್ನು ವಿರೋಧಿಸಿದೆ. ಸಂವಿಧಾನವನ್ನು ತಿರಸ್ಕರಿಸಿದವರು, ವಿರೋಧಿಸಿದವರು ಈಗ ಸಂವಿಧಾನದ ರಕ್ಷಣೆಯ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಅವರು ಮೊದಲಿನಿಂದಲೂ ಸಂವಿಧಾನ ವಿರೋಧಿಗಳಾಗಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT