ಜೈಪುರ: ‘ರಾಜಸ್ಥಾನದ ಸಚಿವ ಸಂಪುಟದಿಂದ ವಜಾಗೊಂಡಿದ್ದ ಕಾಂಗ್ರೆಸ್ ಶಾಸಕ ರಾಜೇಂದ್ರ ಸಿಂಗ್ ಗುಢಾ ಅವರು ಶಿವಸೇನಾ ಪಕ್ಷಕ್ಕೆ (ಶಿಂದೆ ಬಣ) ಸೇರ್ಪಡೆಯಾಗಿದ್ದಾರೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಶನಿವಾರ ಹೇಳಿದ್ದಾರೆ.
ಗುಢಾ ವಿಧಾನಸಭಾ ಕ್ಷೇತ್ರದ ಉದಯಪುರವಟಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಿಂದೆ, ಗುಢಾ ಅವರನ್ನು ಶಿವಸೇನಾಕ್ಕೆ ಬರಮಾಡಿಕೊಂಡರು. ಗುಢಾ ಕ್ಷೇತ್ರ ಜನರ ಕಾರಣಕ್ಕಾಗಿ ರಾಜೇಂದ್ರ ಸಿಂಗ್ ಅವರು ಸಚಿವ ಸ್ಥಾನವನ್ನು ತೊರೆದಿದ್ದಾರೆ ಎಂದೂ ತಿಳಿಸಿದರು.
‘ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಕುರಿತು ಧ್ವನಿ ಎತ್ತಿದ್ದಕ್ಕಾಗಿ ಗುಢಾ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಅವರು ಹೇಳಿದ್ದರಲ್ಲಿ ತಪ್ಪೇನಿದೆ’ ಎಂದು ಶಿಂದೆ ಪ್ರಶ್ನಿಸಿದರು.
‘ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಬೇಕಿದೆ. ಅಲ್ಲದೆ ಮಹಿಳಾ ಸುರಕ್ಷತಾ ಕ್ರಮಗಳು ಹಾಗೂ ಯುವಜನರಿಗೆ ಉದ್ಯೋಗಾವಕಾಶ, ರೈತರ ಅಭಿವೃದ್ಧಿ ಕಾರ್ಯವೂ ನಡೆಯಬೇಕಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಅಗತ್ಯವಿದೆ. ಇಲ್ಲಿನ ಸ್ಥಳೀಯರು ಉದ್ಯೋಗ ಅರಸಿ ಇತರ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಗಣಿಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ’ ಎಂದೂ ಅವರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.