ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರವನ್ನು ಪಾಕ್‌ಗೆ ಕೊಡಲೊಪ್ಪಿದ್ದರೇ ಸರ್ದಾರ್ ಪಟೇಲ್?

‘ಕೈ’ ನಾಯಕನ ಪುಸ್ತಕದಲ್ಲಿ ಅಚ್ಚರಿಯ ಮಾಹಿತಿ
Last Updated 26 ಜೂನ್ 2018, 6:03 IST
ಅಕ್ಷರ ಗಾತ್ರ

ನವದೆಹಲಿ: ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಎಂದೇ ಜನಜನಿತರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಒಪ್ಪಿದ್ದರೇ? ಹೌದು ಎಂದಿದ್ದಾರೆ ಕಾಂಗ್ರೆಸ್‌ನ ಹಿರಿಯ ನಾಯಕ ಸೈಫುದ್ದೀನ್ ಸೋಜ್.

ಕಾಶ್ಮೀರದ ಕುರಿತು ಸೈಫುದ್ದೀನ್ ಬರೆದಿರುವ ‘ಕಾಶ್ಮೀರ: ಹೋರಾಟ ಮತ್ತು ಇತಿಹಾಸದ ಇಣುಕುನೋಟ’ ಎಂಬ ಪುಸ್ತಕ ಸೋಮವಾರ ಬಿಡುಗಡೆಯಾಗಿದೆ. ಕಾಶ್ಮೀರದ ಕುರಿತು ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಧೋರಣೆ ಏನಿತ್ತು? ಪಟೇಲ್‌ ಅವರ ನಿಲುವು ಏನಾಗಿತ್ತು ಎಂಬ ವಿಷಯಗಳೂ ಪುಸ್ತಕದಲ್ಲಿ ಅಡಕವಾಗಿವೆ.

ಸೈಫುದ್ದೀನ್ ಹೇಳಿದ್ದೇನು?: ಪುಸ್ತಕ ಬಿಡುಗಡೆ ಹಿನ್ನೆಲೆಯಲ್ಲಿ ದಿ ಪ್ರಿಂಟ್ ಸಂಪಾದಕ ಶೇಖರ್ ಗುಪ್ತ ಅವರ ಜತೆ ಎನ್‌ಡಿಟಿವಿವಾಕ್‌ ದಿ ಟಾಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೈಫುದ್ದೀನ್ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ನೆಹರು ಮತ್ತು ಪಟೇಲರನ್ನು ‘ಭಾರತದ ಮಹಾನ್ ಪುತ್ರರು’ ಎಂದು ಸೈಫುದ್ದೀನ್ ಬಣ್ಣಿಸಿದ್ದಾರೆ. ಜತೆಗೆ, ಪಟೇಲರು ವಾಸ್ತವವಾದಿಯಾಗಿದ್ದರು ಎಂದು ಹೇಳಿದ್ದಾರೆ. ಪಾಕಿಸ್ತಾನದ ಮೊದಲ ಪ್ರಧಾನಿ ಲಿಖಾಯತ್ ಅಲಿ ಖಾನ್ ಬಗ್ಗೆ ನಂಬಿಕೆಯಿದ್ದ ಪಟೇಲರು ಹೈದರಾಬಾದ್‌ಗೆ ಬದಲಾಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧರಿದ್ದರು ಎಂದು ಹೇಳಿದ್ದಾರೆ.

1947ರ ಅಕ್ಟೋಬರ್‌ನಲ್ಲಿ, ಪಾಕ್‌ ನುಸುಳುಕೋರರನ್ನು ಹಿಮ್ಮೆಟ್ಟಿಸುವ ಸಲುವಾಗಿ ಭಾರತೀಯ ಸೇನೆ ಶ್ರೀನಗರ ತಲುಪಿತ್ತು. ಅದೇ ವೇಳೆ, ಪಟೇಲ್‌ ಅವರಿಂದ ಭಾರತದ ವೈಸರಾಯ್ ಆಗಿದ್ದ ಲಾರ್ಡ್‌ ಮೌಂಟ್‌ಬ್ಯಾಟನ್ ಪ್ರಸ್ತಾವ ಸ್ವೀಕರಿಸಿದ್ದರು. ಮೊದಲಿನಿಂದಲೂ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಬೇಕು ಎಂಬುದೇ ಪಟೇಲ್‌ ಅವರ ಅಚಲ ನಿಲುವಾಗಿತ್ತು. ಹೈದರಾಬಾದ್‌ಗೆ ಬದಲಾಗಿ ಕಾಶ್ಮೀರವನ್ನು ಪಡೆಯುವಂತೆ ಲಿಖಾಯತ್ ಅಲಿ ಅವರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದರು ಎಂದು ಸೈಫುದ್ದೀನ್ ಹೇಳಿದ್ದಾರೆ.

‘ಹೈದರಾಬಾದ್‌ ಬಗ್ಗೆ ಮಾತನಾಡುವುದೂ ಬೇಡ. ಇದು ನಿಮಗೆ ರಸ್ತೆ ಅಥವಾ ಸಾಗರ ಮಾರ್ಗದಲ್ಲಿ ಸಂಪರ್ಕ ಹೊಂದಿದೆಯೇ? ಹೈದರಾಬಾದ್‌ನಲ್ಲಿ ನಿಮಗೇನು ಹಕ್ಕಿದೆ? ನೀವಿದನ್ನು ಪಡೆಯಲಾಗದು. ನೀವು ಕಾಶ್ಮೀರವನ್ನು ತೆಗೆದುಕೊಳ್ಳಿ’ ಎಂಬುದಾಗಿ ಪಟೇಲರು ಹೇಳಿದ್ದರು ಎಂದು ಸೈಫುದ್ದೀನ್ ತಿಳಿಸಿದ್ದಾರೆ.

ನಾನು ನಿಮಗೆ ಆಕರ್ಷಕ ಕಥೆಯೊಂದನ್ನು ಹೇಳುತ್ತೇನೆ ಎಂದ ಸೈಫುದ್ದೀನ್, ನಿಮ್ಮ ಸೇನೆ ಶ್ರೀನಗರದಲ್ಲಿ ಬಂದಿಳಿದ ಅದೇ ದಿನ ಮೌಂಟ್‌ಬ್ಯಾಟನ್ ಲಾಹೋರ್‌ಗೆ ತೆರಳಿದ್ದರು. ಅವರಿಗೆ ಪಾಕಿಸ್ತಾನದ ಗವರ್ನರ್, ಪ್ರಧಾನಿ ಮತ್ತು ನಾಲ್ವರು ಸಚಿವರ ಜತೆ ಔತಣಕೂಟ ಏರ್ಪಡಿಸಲಾಗಿತ್ತು. ಅಲ್ಲಿ ಮಾತನಾಡಿದ ಮೌಂಟ್‌ಬ್ಯಾಟನ್ ‘ನಾನು ಭಾರತದ ಪ್ರಮುಖ ವ್ಯಕ್ತಿ ಸರ್ದಾರ್ ಪಟೇಲ್ ಅವರಿಂದ ನಿಮಗೊಂದು ಸಂದೇಶ ತಂದಿದ್ದೇನೆ. ನಿಮ್ಮ ಸಂಪರ್ಕದಲ್ಲಿಲ್ಲದ ಹೈದರಾಬಾದ್ ಅನ್ನು ಮರೆತುಬಿಡಿ. ಕಾಶ್ಮೀರವನ್ನು ಪಡೆದುಕೊಳ್ಳಿ’ ಎಂದು ಹೇಳಿದ್ದರು.

ಆದರೆ, ಪಾಕಿಸ್ತಾನದ ಖ್ಯಾತ ರಾಜಕಾರಣಿ ಸರ್ದಾರ್ ಶೌಕತ್ ಹಯಾತ್ ಖಾನ್ ತಮ್ಮ ಪುಸ್ತಕದಲ್ಲಿ ಬರೆದಿರುವ ಪ್ರಕಾರ, ಲಿಖಾಯತ್ ಅಲಿಗೆ ಇತಿಹಾಸ, ಭೂಗೋಳದ ಬಗ್ಗೆ ಜ್ಞಾನವಿರಲಿಲ್ಲ. ಹೀಗಾಗಿ ಅವರು ಪಟೇಲ್ ಪ್ರಸ್ತಾವವನ್ನು ಒಪ್ಪಿರಲಿಲ್ಲ ಎಂದು ಸೈಫುದ್ದೀನ್ ತಿಳಿಸಿದ್ದಾರೆ.

ಕಾಶ್ಮೀರ ಬಿಡಲು ಸಿದ್ಧರಿರಲಿಲ್ಲ ನೆಹರು: ಕಾಶ್ಮೀರದ ಬಗ್ಗೆ ಜವಹರಲಾಲ್‌ ನೆಹರು ನಿಲುವು ಕಠಿಣವಾದದ್ದಾಗಿತ್ತು. ಹೀಗಾಗಿ ಆ ವಿಚಾರದಲ್ಲಿ ಮೇಲುಗೈ ಸಾಧಿಸುವುದು ಪಟೇಲರಿಗೆ ಸಾಧ್ಯವಾಗಲಿಲ್ಲ ಎಂದು ಸೈಫುದ್ದೀನ್ ಹೇಳಿದ್ದಾರೆ.

ಕಾಶ್ಮೀರವು ಜಾತ್ಯತೀತ ಭಾರತದ ಭಾಗವಾಗಿರಬೇಕು ಎಂಬುದು ನೆಹರು ಅವರ ಪ್ರಬಲ ಇಚ್ಛೆಯಾಗಿತ್ತು. ಕಾಶ್ಮೀರವು ಭಾರತದಲ್ಲೇ ಸುರಕ್ಷಿತವಾಗಿರಲು ಸಾಧ್ಯ ಎಂಬುದು ಅವರ ನಂಬಿಕೆಯಾಗಿತ್ತು. 1945ರಲ್ಲಿ ಸೋಪೊರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಲು ಬರುವಾಗಲೇ ಕಾಶ್ಮೀರದ ಸಂಪೂರ್ಣ ಇತಿಹಾಸ ನೆಹರು ಅವರಿಗೆ ತಿಳಿದಿತ್ತು ಎಂದು ಸೈಫುದ್ದೀನ್ ಹೇಳಿದ್ದಾರೆ.

ದ್ವಿರಾಷ್ಟ್ರ ಸಿದ್ಧಾಂತ ಒಪ್ಪದಿದ್ದ ಶೇಖ್ ಅಬ್ದುಲ್ಲಾ: ಎರಡು ರಾಷ್ಟ್ರ ಸಿದ್ಧಾಂತವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ತಿರಸ್ಕರಿಸಿದ್ದರು. ಭಾರತ ಸ್ವತಂತ್ರಗೊಂಡ ಆಗಸ್ಟ್‌ 15ರ ನಂತರ 1947ರ ಅಕ್ಟೋಬರ್‌ 22ರ ವರೆಗೆ ಕಾಶ್ಮೀರ ಸ್ವತಂತ್ರವಾಗಿದೆ ಎಂದೇ ಅವರು ಹೇಳಿಕೊಂಡಿದ್ದರು. ಆದರೆ, ಯಾವಾಗ ಪಾಕ್‌ ಸೇನೆ ದಾಳಿ ಮಾಡಿತೋ ಆಗ ಸ್ವತಂತ್ರವಾಗಿರುವುದು ಸಾಧ್ಯವಿಲ್ಲ ಎಂದು ಅವರಿಗೆ ಅನ್ನಿಸಿತ್ತು.

ಪಾಕಿಸ್ತಾನ, ರಷ್ಯಾ, ಚೀನಾ, ಆಫ್ಗಾನಿಸ್ತಾನ ಮತ್ತು ಭಾರತಕ್ಕೆ ಕಾಶ್ಮೀರ ಸ್ವತಂತ್ರವಾಗಿರುವುದು ಬೇಕಾಗಿಲ್ಲ. ಹೀಗಾಗಿ ಅದು ಸಾಧ್ಯವೂ ಇಲ್ಲ ಎಂದು ಶೇಖ್ ಅಬ್ದುಲ್ಲಾ ತಮ್ಮ ಪುಸ್ತಕದಲ್ಲಿ ಬರೆದಿದ್ದರು ಎಂಬುದಾಗಿ ಸೈಫುದ್ದೀನ್ ತಿಳಿಸಿದ್ದಾರೆ.

ಭಾರತದಿಂದ ದೂರವಿರುವುದು ಶೇಖ್ ಅಬ್ದುಲ್ಲಾ ಅವರಿಗೆ ಬೇಕಾಗಿಯೂ ಇರಲಿಲ್ಲ. ಭಾರತವು ಜಾತ್ಯತೀತವಾಗಿರುವವರೆಗೆ, ಕಾಶ್ಮೀರದ ಬಗ್ಗೆ ಸಹಾನುಭೂತಿ ಹೊಂದಿರುವ ವರೆಗೆ ಭಾರತದ ಜತೆ ಇರುವುದೇ ಅವರ ಬಯಕೆಯಾಗಿತ್ತು. ಅದರ ಫಲವೇ ದೆಹಲಿ ಒಪ್ಪಂದ ಎಂದು ಸೈಫುದ್ದೀನ್ ಹೇಳಿದ್ದಾರೆ.

ಅಂತರ ಕಾಯ್ದುಕೊಂಡ ಕಾಂಗ್ರೆಸ್

ಸೈಫುದ್ದೀನ್ ಅವರ ಪುಸ್ತಕ ಬಿಡುಗಡೆ ಸಮಾರಂಭದಿಂದ ದೂರ ಉಳಿಯುವಂತೆ ಎಲ್ಲ ನಾಯಕರಿಗೆ ಕಾಂಗ್ರೆಸ್ ಸೂಚಿಸಿತ್ತು. ಆದರೂ ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಚಿದಂಬರಂ ಗೈರು

‌ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುಸ್ತಕ ಬಿಡುಗಡೆ ಮಾಡುವವರಿದ್ದರು. ಆದರೆ, ಪಕ್ಷದ ನಿರ್ದೇಶನಾನುಸಾರ ಅವರು ಸಮಾರಂಭಕ್ಕೆ ತೆರಳಿಲ್ಲ. ಸೈಫುದ್ದೀನ್ ಅವರು ಪುಸ್ತಕದಲ್ಲಿ ಪ್ರತಿಪಾದಿಸಿರುವ ಅಂಶಗಳನ್ನು ಈಗಾಗಲೇ ಕಾಂಗ್ರೆಸ್ ನಿರಾಕರಿಸಿದೆ.
**
ಇದು ನನ್ನ ಪುಸ್ತಕ. ಇದಕ್ಕೆ ನಾನು ಜವಾಬ್ದಾರಿ. ಪಕ್ಷಕ್ಕೆ ಇದರಿಂದ ಯಾವುದೇ ತೊಂದರೆಯಿಲ್ಲ.
– ಸೈಫುದ್ದೀನ್ ಸೋಜ್, ಕಾಂಗ್ರೆಸ್‌ನ ಹಿರಿಯ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT